ಹೊಸದಿಲ್ಲಿ : ಮುಂಗಾರು ಮಾರುತಗಳು ಇನ್ನೂ ಎರಡು ದಿನ ವಿಳಂಬವಾಗಲಿದ್ದು ಜೂನ್ 8ರಂದು ಕೇರಳ ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.
ಇಂದಿನಿಂದ ನೈಋತ್ಯ ಮಾರುತಗಳು ದಕ್ಷಿಣ ದ್ವೀಪಕಲ್ಪವನ್ನು ಪ್ರವೇಶಿಸಲು ಅವಶ್ಯವಿರುವ ಸನ್ನಿವೇಶಗಳು ಈಗ ಅನುಕೂಲಕರವಾಗಿವೆ. ಅಂತೆಯೇ ಅಲ್ಲಿಂದ ಮುಂದಿನ 72 ತಾಸುಗಳ ಬಳಿಕ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿದೆ.
ಮುಂಗಾರು ಮಳೆ ಕೇರಳವನ್ನು ಪ್ರವೇಶಿಸಿದ 24 ತಾಸುಗಳ ಬಳಿಕದಲ್ಲಿ ಉತ್ತರ ಮತ್ತು ದಕ್ಷಿಣ ಒಡಿಶಾದಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎಚ್ ಆರ್ ಬಿಸ್ವಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೋಡಗಳು ಪಶ್ಚಿಮದಿಂದ ಪೂರ್ವದೆಡೆಗೆ ಸಾಗುತ್ತಿವೆ. ಆದರೆ ಮುಂಗಾರು ಮಳೆಯ ಮೋಡಗಳು ಬಂದಾಗ ಅವು ಪೂರ್ವದಿಂದ ಪಶ್ಚಿಮದೆಡೆಗೆ ಸಂಚರಿಸಲಿವೆ. ಜೂನ್ 8ರಂದು ಒಡಿಶಾ ಕರಾವಳಿಯಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ ಎಂದವರು ಹೇಳಿದರು.
ಈ ನಡುವೆ ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರ; ಉತ್ತರಾಖಂಡ ದ ಹಲವುಭಾಗಗಳಲ್ಲಿ, ಅರುಣಾಚಲ ಪ್ರದೇಶ, ಕೇರಳದ ಕೆಲವೆಡೆಗಳಲ್ಲಿ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮತ್ತು ಚದುರಿದಂತೆ ಜಾಖರ್ಂಡ್, ಪಶ್ಚಿಮ ಬಂಗಾಲ, ಸಿಕ್ಕಿಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಮರಾಠವಾಡ, ವಿದರ್ಭ, ತೆಲಂಗಾಣ, ಆಂದ್ರ ಪ್ರದೇಶ ಕರಾವಳಿ, ಕರ್ನಾಟಕ ಉತ್ತರ ಒಳನಾಡು ಮತ್ತು ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ.