ನವದೆಹಲಿ: ವಿಶ್ವಸಂಸ್ಥೆ ವರದಿ ಪ್ರಕಾರ ಇನ್ನೂ ಕೇವಲ 8 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ
ಚೀನಾವನ್ನು ಭಾರತ ಹಿಂದಿಕ್ಕಲಿದ್ದು, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಈ ಮಧ್ಯೆ 2019 ಹಾಗೂ 2050ರ ನಡುವೆ ಚೀನಾದ ಜನಸಂಖ್ಯೆಯಲ್ಲಿ 31.4 ಮಿಲಿಯನ್ ಅಂದರೆ ಶೇ.2.2 ರಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದೆ.
ವಿಶ್ವ ಜನಸಂಖ್ಯಾ ನಿರೀಕ್ಷೆಗಳು 2019 ಶೀರ್ಷಿಕೆಯ ವರದಿ ಅನುಸಾರ 2050`ರೊಳಗೆ ವಿಶ್ವದ ಜನಸಂಖ್ಯೆ 9.7 ಬಿಲಿಯನ್ ಗೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ 7.7 ಬಿಲಿಯನ್ ಜನಸಂಖ್ಯೆ ಇದೆ. ಅಲ್ಲದೇ, ಭಾರತದ ಜೊತೆಗೆ ಇತರ ಎಂಟು ದೇಶಗಳು ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿವೆ.
ಭಾರತ,ನೈಜೀರಿಯಾ, ಪಾಕಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೊ, ಇಥಿಯೋಪಿಯಾ, ತಾಂಜಾನಿಯಾ, ಇಂಡೊನೇಷ್ಯಾ, ಈಜಿಪ್ಟ್ ಹಾಗೂ ಅಮೆರಿಕದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. 2050ರೊಳಗೆ ಆಫ್ರಿಕಾ ದೇಶದಲ್ಲಿ ಜನಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ಜಾಗತಿಕ ಸಂತತಿ ದರ ಕಡಿಮೆಯಾದರೂ ಜನಸಂಖ್ಯೆ ಬೆಳವಣಿಗೆ ದರದಲ್ಲಿ ಹೆಚ್ಚಳವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ಉಲ್ಲೇಖಿಸಿದೆ. 1990ರಲ್ಲಿದ್ದ ಪ್ರತಿ ಮಹಿಳೆ ಜನನದ ಸರಾಸರಿ ಸಂಖ್ಯೆ ಶೇ. 3.2 ರಿಂದ 2050ಕ್ಕೆ ಶೇ, 2.1ಕ್ಕೆ ಕುಸಿಯಲಿದೆ. ಇದು ರಾಷ್ಟ್ರೀಯ ಜನಸಂಖ್ಯೆ ನಿಯಂತ್ರಣಕ್ಕೆ ಅಗತ್ಯವಾಗಿದೆ ಎಂಬಂತಹ ಅಂಶವನ್ನು ವರದಿ ತಿಳಿಸಿದೆ.
1990ರಲ್ಲಿ 64.2 ವರ್ಷವಿದ್ದ ಜೀವನ ನಿರೀಕ್ಷೆ 2019ರ ವೇಳೆಗೆ 72.6 ವರ್ಷವಾಗಿದೆ. 2050ಕ್ಕೆ 77. 1 ವರ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.