HEALTH TIPS

ಬದಿಯಡ್ಕ ಹಲಸುಮೇಳ : ವಿವಿಧ ಪೇಟೆಗಳಲ್ಲಿ ಪ್ರಚಾರ- ಜೂ.8ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ

         
       ಬದಿಯಡ್ಕ: ಕೇರಳ ರಾಜ್ಯದ ಹಣ್ಣುಗಳ ರಾಜ ಹಲಸು. `ಹಲಸು'ಗೆ ರಾಜ್ಯದಲ್ಲಿ ಶ್ರೇಷ್ಠ ಸ್ಥಾನವಿದೆ. ಒಂದು ಕಾಲದಲ್ಲಿ ಬಡವರ ಹಣ್ಣು ಎಂದು ಮೂಲೆಗುಂಪಾಗಿದ್ದ ಹಲಸು ಇಂದು ರಾಜನಂತೆ ತಲೆಯೆತ್ತಿ ನಿಂತಿದ್ದು, ಎಲ್ಲೆಡೆಯಿಂದ ಹಲಸಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಈ ನಿಟ್ಟಿನಲ್ಲಿ ಹಲಸಿನ ಮೌಲ್ಯವರ್ಧನೆಗಾಗಿ ಹಾಗೂ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿನ ಉದ್ದೇಶದಿಂದ ಜೂನ್ 8ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಒಂದು ದಿನದ `ಹಲಸು ಮೇಳ' ನಡೆಯಲಿರುವುದು. ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಮುಳ್ಳೇರಿಯ ಹವ್ಯಕ ಮಂಡಲದ ಶಿಷ್ಯವೃಂದದವರ ನೇತೃತ್ವದಲ್ಲಿ, ಬದಿಯಡ್ಕ ಮಹಿಳೋದಯದ ಸಹಕಾರದೊಂದಿಗೆ ಹಲಸು ಮೇಳವು ನಡೆಯಲಿದೆ. ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ನಿವೃತ್ತ ಉಪ ನೋಂದಣಾಧಿಕಾರಿ ಮಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರುಕಟ್ಟೆಯ ಬಗ್ಗೆ ಸಿಪಿಸಿಆರ್‍ಐಯ ವಿಜ್ಞಾನಿ ಡಾ. ಸರಿತಾ ಹೆಗ್ಡೆ ಹಾಗೂ ಹಲಸಿನ ಕೃಷಿ ಮತ್ತು ಗೋವಿನ ಆಹಾರ ಎಂಬ ವಿಚಾರದಲ್ಲಿ ವೆಂಕಟಕೃಷ್ಣ ಶರ್ಮ ಮುಳಿಯ ಮಾಹಿತಿಯನ್ನು ನೀಡಲಿದ್ದಾರೆ. ಬೆಳಿಗ್ಗೆ 9.30ರಿಂದ ಸಂಜೆಯ ತನಕ ನಡೆಯಲಿರುವ ಮೇಳದಲ್ಲಿ ವಿವಿಧ ಸ್ಪರ್ಧೆಗಳೂ ನಡೆಯಲಿರುವುದು. ಹಲಸು ಮೇಳದ ಪ್ರಚಾರದ ಭಾಗವಾಗಿ ಮಂಗಳವಾರ ಕಾಸರಗೋಡು, ಮುಳ್ಳೇರಿಯ, ಬದಿಯಡ್ಕ, ಕುಂಬಳೆ, ಸೀತಾಂಗೋಳಿ ಹಾಗೂ ಇನ್ನಿತರ ಪೇಟೆಗಳಲ್ಲಿ ಕಾರ್ಯಕರ್ತರು ಜೊತೆಗೂಡಿ ಆಮಂತ್ರಣ ಪತ್ರಿಕೆಯನ್ನು ವಿತರಿಸಿದರು.
          ಹಲಸು ಔಷಧೀಯ ವೃಕ್ಷ :
ಹಲಸಿನ ಮರ ಔಷಧೀಯ ವೃಕ್ಷಗಳಲ್ಲಿ ಒಂದಾಗಿದೆ. ಔಷಧವಷ್ಟೇ ಅಲ್ಲ, ಅದರ ಮರ, ತಿರುಳು, ಎಲೆಗಳಲ್ಲಿ ಆಹಾರಗುಣವನ್ನು ವರ್ಧಿಸುವ ಶಕ್ತಿಯಿದೆ. ವಾಸ್ತು ಶಾಸ್ತ್ರ ನಿಯಮದಂತೆ ಮನೆಯ ಪೂರ್ವ ಈಶಾನ್ಯದಲ್ಲಿ ಹಲಸಿನ ಹಲಸಿನ ಸ್ಥಾನವಾಗಿದೆ. ಹವನಗಳಲ್ಲಿ ಅರ್ಪಿಸುವ ದ್ರವ್ಯಗಳನ್ನು ಹಲಸಿನ ಎಲೆಗಳಲ್ಲಿ ನಿರ್ಮಿಸಿದ `ಸ್ರುವ' ಯಾ `ದರ್ವೀ'ಗಳೆನ್ನುವರು. ವರುಣಪೂಜೆ, ಕಲಶಾರ್ಚನೆಗಳಲ್ಲಿ ಹಲಸು ಮಾವಿನ ಚಿಗುರುಗಳನ್ನು ನೀರಿನಿಂದ ತುಂಬಿದ ಕುಂಭಗಳಲ್ಲಿರಿಸುತ್ತಾರೆ. ನೀರು ಶುದ್ಧವಾಗಲು ಹಲಸಿನ ಕುಡಿ (ಚಿಗುರು)ಗಳನ್ನು ನೀರಿನಲ್ಲಿ ಹಾಕಿಡುತ್ತಾರೆ. ನೀರಿನ ಗುಣ ವರ್ಧನೆಗಾಗಿ ನಡೆಸುವ ವೈದಿಕ ಕ್ರಿಯೆಯೇ `ಉದಕಶಾಂತಿ'. ಹಿಂದೆ ಜ್ವರ ನಿವಾರಣಾ ನಂತರದ 3 ದಿನಗಳಲ್ಲಿ ಹಲಸಿನೆಲೆಯ ಚಿಳ್ಳೆ (ಚಮಚ) ತಯಾರಿಸಿ ಅದರಲ್ಲಿ ಗಂಜಿ ಊಟ ಮಾಡುವ ಪರಿಪಾಠವಿತ್ತು. ಹಲಸಿನ ಎಲೆಯಿಂದ ತಯಾರಿಸಿದ ಕೊಟ್ಟೆಗಳಲ್ಲಿ ಕಡುಬು ತಯಾರಿಸುವುದು ಪದ್ಧತಿಯಾಗಿದೆ. ಹಲಸಿನ ಮರದಿಂದ ತಯಾರಿಸಿದ ಚಮಚ, ಸೌಟು, ತಟ್ಟೆ, ಮರಿಗೆ, ಇಶುಂಚಲುಗಳನ್ನು ಈಗಳೂ ಕೆಲವು ಮನೆಗಳಲ್ಲಿ ಕಾಣಬಹುದು. ಇವು ನೀರು, ಉಪ್ಪು ಸಂಪರ್ಕದಿಂದ ಹಾಳಾಗಲಾರವು. ಹಲಸಿನ ಹಣ್ಣು ಶುಕ್ರವರ್ಧಕ, ಎಲೆ ಬೇರುಗಳು ಚರ್ಮರೋಗಹರ, ವಿಷಹರ. ಗ್ರಂಥಿ ಭಾವುಗಳಿಗೆ ಹಲಸಿನ ಎಲೆಗಳನ್ನಿಟ್ಟು ಕಟ್ಟುವ ಪದ್ಧತಿಯಿತ್ತು. ಆಹಾರದ ಚೈತನ್ಯ ವರ್ಧಿಸುವಲ್ಲಿ ಬಾಳೆಲೆಗೂ ಮೀರಿದ ಸ್ಥಾನ ಹಲಸಿನ ಎಲೆಯದಾಗಿದೆ ಎಂಬ ಮಾಹಿತಿಯನ್ನು ಡಾ. ಮಹಾಬಲ ಭಟ್ ಕಾಟಿಪಳ್ಳ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries