ನವದೆಹಲಿ: ಜೂನ್ 3ರಂದು ಅರುಣಾಚಲ ಪ್ರದೇಶದ ಜೊರ್ಹಾಟ್ ವಾಯುನೆಲೆಯಿಂದ ಹೊರಟಿದ್ದ ಎಎನ್-32 ವಿಮಾನ ಅರ್ಧ ಗಂಟೆಯಲ್ಲಿ ಸಂಪರ್ಕ ಕಡಿದುಕೊಂಡಿದ್ದು ಸರಿಸುಮಾರು 9 ದಿಗನಳ ನಂತರ ಇದೀಗ ವಿಮಾನ ಅವಶೇಷಗಳು ಪತ್ತೆಯಾಗಿವೆ.
ಅರುಣಾಚಲ ಪ್ರದೇಶದ ಟಾಟೋದ ಈಶಾನ್ಯಕ್ಕಿರುವ ಲಿಪೋದ ಉತ್ತರ ಭಾಗಕ್ಕೆ 16 ಕಿ.ಮೀ ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದು ವಾಯುಪಡೆ ತಿಳಿಸಿದೆ.
ಅಸ್ಸಾಂನ ಜೋರ್ಹತ್ ವಾಯುಪಡೆ ನೆಲೆಯಿಂದ ಜೂನ್ 3ರಂದು ಮಧ್ಯಾಹ್ನ 12.27ಕ್ಕೆ ಹೊರಟ ವಿಮಾನ ನಾಪತ್ತೆಯಾಗಿತ್ತು. 1.30ಕ್ಕೆ ಮೆಂಚುಕಾ ತಲುಪಬೇಕಿದ್ದ ವಿಮಾನ, ಮಧ್ಯಾಹ್ನ 1.00 ಗಂಟೆಗೆ ಸಂಪರ್ಕ ಕಳೆದುಕೊಂಡಿತ್ತು.
ನಾಪತ್ತೆಯಾದ ದಿನ ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಇತ್ತು. ವಾಯುಪಡೆ ತಕ್ಷಣ ಶೋಧ ಕಾರ್ಯಾಚರಣೆಗಿಳಿದು, ಸಿ-130, ಎಎನ್-32, ಎರಡು ಮಿಗ್-17 ಹೆಲಿಕಾಪ್ಟರ್‍ಗಳು ಹಾಗೂ ಸೇನೆಯ ಎಎಲ್‍ಎಚ್ ಹೆಲಿಕಾಪ್ಟರ್‍ಗಳನ್ನು ನಿಯೋಜಿಸಿತ್ತು. ಶೋಧ ಕಾರ್ಯಾಚರಣೆಗೆ ವಾಯುಪಡೆಯೊಂದಿಗೆ ಐಟಿಬಿಪಿ ಅರೆಸೇನಾ ಪಡೆ, ರಾಜ್ಯ ಸರ್ಕಾರ, ನಾಗರಿಕ ಸಂಸ್ಥೆಗಳು ಕೈಜೋಡಿಸಿದ್ದವು.
ಎಲೆಕ್ಟ್ರೋ-ಆಪ್ಟಿಕಲ್ ಮತ್ತು ಇನ್ಫ್ರಾ-ರೆಡ್ ಸೆನ್ಸರ್ ಗಳಿದ್ದ ಪಿ-8ಐ ವಿಮಾನದಿಂದ ಜೋರ್ಹತ್ ಮತ್ತು ಮೆಚುಕಾ ನಡುವಿನ ದಟ್ಟ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಈ ಪ್ರದೇಶದ ಚಿತ್ರಗಳನ್ನು ತೆಗೆಯಲು ಇಸ್ರೋ, ಕಾರ್ಟೋಸ್ಯಾಟ್ ಮತ್ತು ರಿ-ಸ್ಯಾಟ್ ಉಪಗ್ರಹಗಳನ್ನೂ ಬಳಸಿಕೊಂಡಿತ್ತು.
ಎಎನ್-32 ವಿಮಾನ ನಾಪತ್ತೆಯಾಗಿರುವುದು ಇದೇ ಮೊದಲ ಸಲವಲ್ಲ:
2016ರಲ್ಲಿ ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ತೆರಳುತ್ತಿದ್ದ 29 ಜನರಿದ್ದ ವಿಮಾನ ನಾಪತ್ತೆಯಾಗಿತ್ತು. ಆದರೆ, ಈ ವಿಮಾನ ಪತ್ತೆಯಾಗಲೇ ಇಲ್ಲ. ಬಳಿಕ ಈ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆಂಬ ತೀರ್ಮಾನಕ್ಕೆ ಬರಲಾಗಿತ್ತು. 2009ರ ಜೂನ್ ನಲ್ಲಿ ಅರುಣಾಚಲ ಪ್ರದೇಶ ಮೆಚುಕಾದಿಂದ 30 ಕಿ.ಮೀ ದೂರದ ರಿಂಚಿ ಪರ್ವತದಲ್ಲಿ ಎಎನ್-32 ವಿಮಾನ ದುರಂತಕ್ಕೀಡಾಗಿ ಅದರಲ್ಲಿದ್ದ ಎಲ್ಲ 13 ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದರು.
2000ನೇ ಇಸವಿಯಲ್ಲಿ ಅರುಣಾಚಲ ಪ್ರದೇಶದ ವಿಜಯ್ ನಗರದಲ್ಲಿ ಎಎನ್-32 ಪತನಗೊಂಡಿತ್ತು. ಮತ್ತೊಂದು ದುರಂತ 1999ರ ಮಾರ್ಚ್ ದೆಹಲಿಯ ಪಾಲಮ್ ವಿಮಾನದಲ್ಲಿ ನಡೆದು 21 ಮಂದಿ ಮೃತಪಟ್ಟಿದ್ದರು. 1992ರಲ್ಲಿ ಆಗಸದಲ್ಲಿ ಎರಡು ಎಎನ್-32 ವಿಮಾನಗಳು ಪರಸ್ಪರ ಡಿಕ್ಕಿಯಾಗಿ ದುರಂತ ಸಂಭವಿಸಿತ್ತು.