ತಿರುವನಂತಪುರ: ನೈರುತ್ಯ ಮಾನ್ಸೂನ್? ಮಾರುತಗಳು ನಿರೀಕ್ಷೆಯಂತೆಯೇ ಶನಿವಾರ ಕೇರಳಕ್ಕೆ ಅಪ್ಪಳಿಸಿದ್ದು, ಭಾರಿ ಮಳೆ ಹಿನ್ನಲೆಯಲ್ಲಿ ಕೇರಳದ 9 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಹಿಂದೆಯೇ ಕೇರಳದ ಕೆಲ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ತ್ರಿಸ್ಸೂರು, ಮಲ್ಲಪುರಂ ಮತ್ತು ಕೋಝಿಕೋಡ್ ನಲ್ಲಿ ಅತಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಅಂತೆಯೇ ತಿರುವನಂತಪುರಂ, ಕೊಲ್ಲಂ, ಕೊಟ್ಟಯಾಂ ಸೇರಿದಂತೆ 9 ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ.
ಪ್ರಸ್ತುತ ಕೇರಳದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಪ್ರತೀ ಗಂಟೆಗೆ 35ರಿಂದ 45 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಸ್ಥಳೀಯ ಜಿಲ್ಲಾಡಳಿತ ಸೂಚನೆ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಕೆಲವು ಸ್ಥಳಗಳಲ್ಲಿ ರೆಡ್? ಆಲರ್ಟ್? ಘೋಷಣೆಯಾಗಿದ್ದು, ಅಗತ್ಯ ಕ್ರಮಕ್ಕೆ ಸಜ್ಜಾಗುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಜೊತೆಗೆ ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ಕ್ರಮ ಕೈಗೊಳ್ಳಲಾಗಿದ್ದು, ತಗ್ಗು ಪ್ರದೇಶಗಳು ಮತ್ತು ನದಿಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಸಾಗಿದೆ. ಅಂತೆಯೇ ಕಂಟ್ರೋಲ್? ರೂಂಗಳನ್ನು ನಿರ್ಮಾಣ ಮಾಡಲಾಗಿದೆ.
ಪೂರ್ವ ಮುಂಗಾರಿನಲ್ಲೇ ಶೇ.25ರಷ್ಟು ಮಳೆ ಕೊರತೆ:
ಇನ್ನು ಕೇರಳದಲ್ಲಿಪೂರ್ವ ಮುಂಗಾರು ಅವಧಿ ಅಂದರೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.25ರಷ್ಟು ಮಳೆ ಕೊರತೆಯುಂಟಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 99 ಮಿ.ಮೀ ಮಳೆಯಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 131ಮಿ.ಮೀ ಮಳೆಯಾಗಬೇಕಿತ್ತು. ಕಳೆದ 65 ವರ್ಷಗಳಲ್ಲಿ ಇಷ್ಟು ಕಡಿಮೆ ಪ್ರಮಾಣದ ಮಳೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ. ಅಂತೆಯೇ ಖಾಸಗಿ ಹವಾಮಾನ ಇಲಾಖೆ ಸ್ಕೈಮೇಟ್ ಕೂಡ ಈ ಬಗ್ಗೆ ವರದಿ ನೀಡಿದ್ದು, ಈ ಬಾರಿ ಮಾನ್ಸೂನ್ ಮಾರುತಗಳು ಕೊಂಚ ದುರ್ಬಲವಾಗಿದ್ದು, ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.