ಬದಿಯಡ್ಕ: ನೂರು ವರ್ಷಗಳ ಹಿಂದೆ ಸಾಮಾಜಿಕ, ಆರ್ಥಿಕ ಅಸ್ತಿರತೆಯ ಕಾಲಘಟ್ಟದಲ್ಲಿ ಅಭಿವೃದ್ದಿಯ ಕನಸುಗಳೊಂದಿಗೆ ಹಿರಿಯರ ಪರಿಶ್ರಮದ ಫಲವಾಗಿ ಸಹಕಾರಿ ಪರಿಕಲ್ಪನೆ ತಲೆಯೆತ್ತಿರುವುದು ಇತಿಹಾಸ. ಈ ಪೈಕಿ ಮುಂಚೂಣಿಯಲ್ಲಿರುವ ಪೆರಡಾಲ ಸಹಕಾರಿ ಬ್ಯಾಂಕ್ ಇಂದು ಶತಮಾನೋತ್ಸವದ ಸಂಭ್ರಮದಲ್ಲಿದೆ. ಸಹಕಾರಿ ಕ್ಷೇತ್ರವು ಪ್ರಜಾಪ್ರಭುತ್ವದ ತೊಟ್ಟಿಲು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಶತಮಾನೋತ್ಸವದ ಅಂಗವಾಗಿ ನಿರ್ಮಿಸಲಾದ ಬ್ಯಾಂಕಿನ ನವೀಕೃತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ, ಬಳಿಕ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಗುಲಾಮರಾಗಿದ್ದ ಕಾಲಘಟ್ಟದಲ್ಲಿ ಇಲ್ಲಿನ ಹಿರಿಯರು ಸ್ವಾಭಿಮಾನಪೂರ್ವಕವಾಗಿ ಬಾಳಬೇಕೆಂದು ಕಾನೂನು ಬದ್ಧವಾದ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಬ್ರಿಟೀಷರ ಕಾಲದಲ್ಲಿ ಭಾರತವನ್ನು ಬೇಡುವವರ ದೇಶ, ಹಾವಾಡಿಗರ ದೇಶ, ಭಿಕ್ಷುಕರ ದೇಶವೆಂದು ಗೇಲಿಮಾಡುತ್ತಿದ್ದ ಕಾಲದಲ್ಲಿ ಸಹಕಾರಿ ದೀಪವನ್ನು ಬೆಳಗಿಸಿದ್ದಾರೆ. ನೂರು ವರ್ಷಗಳಿಂದ ಮಾಡಿದ ಪ್ರಯತ್ನದ ಫಲವಾಗಿ ಇಂದು ಡಿಜಿಟಲ್ ಬ್ಯಾಂಕ್ ಆಗಿ ಸಾಕಾರವಾಗಿದೆ. ಭಾರತದ ಕುಟುಂಬ ಜೀವನವೇ ಜಗತ್ತಿನ ಮೊತ್ತಮೊದಲ ಅಲಿಖಿತ ಸಹಕಾರಿ ಸಂಸ್ಥೆಗಳು ಎಂದು ಬ್ರಟೀಷರು ನಮ್ಮನ್ನು ಗೌರವಿಸುತ್ತಾರೆ. ಸಹಕಾರಿ ಕ್ಷೇತ್ರದ ತೊಟ್ಟಿಲು ಭಾರತವಾಗಿದೆ. ಲಾಟನು, ಗ್ಯಾಸು ಲೈಟುಗಳನ್ನು ಹಿಡಿದು ನಡೆಯುತ್ತಿದ್ದ ಕಾಲದಲ್ಲಿ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರಸ್ತುತ ಅಭಿವೃದ್ಧಿಯನ್ನು ಕಾಣುತ್ತಿರುವ ಭಾರತದೇಶವು ಸೂಪರ್ ಪವರ್‍ನ ಕಡೆಗೆ ಹೋಗಲು ಹಿರಿಯರ ಕೊಡುಗೆಯಿದೆ. ದೇಶದ ತತ್ವ ಸಿದ್ಧಾಂತಗಳಿಗೆ ಜಗತ್ತು ಮತ್ತೆ ತೆರೆಯುತ್ತಿದೆ. ಸಾವಯವ, ಸಹಕಾರ, ಸಂಸ್ಕøತ, ಯೋಗದ ಮೂಲಕ ಭಾರತ ಗಮನಸೆಳೆಯುತ್ತಿದೆ. ಸೈಕಲ್‍ನಲ್ಲಿ ಪ್ರಯಾಣಿಸುವವನೂ ಭಾರತದ ಮಂತ್ರಿಯಾಗಲು ಸಾಧ್ಯ ಎಂದರೆ ಭಾರತ ಬದಲಾಗುತ್ತಿದೆ ಎಂದು ಅರ್ಥ. ಪೆರಡಾಲ ಸಂಸ್ಥೆಯು ಡಿಜಿಟಲ್ ಆಗಿ ಪರಿವರ್ತಿತವಾಗಿದ್ದು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶತಮಾನೋತ್ಸವ ಸಮಾರಂಭವನ್ನು ಬ್ಯಾಂಕ್‍ನ ಹಿರಿಯ ಸದಸ್ಯ ಕಾನತ್ತಿಲ ಮಹಾಲಿಂಗ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಊರಿನ ಹಿರಿಯರಾದ ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಧ್ವಜಾರೋಹಣಗೈದು ಚಾಲನೆ ನೀಡಿದರು. ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶತ ಸಹಕಾರ ಪಥ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶತಮಾನಗಳಿಂದ ಜನಸೇವೆಗೈದ ಸಂಸ್ಥೆಯು ಇಂದು ಎತ್ತರಕ್ಕೆ ಬೆಳೆದು ನಿಂತು ಊರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಊರಿಗೇ ಹೆಮ್ಮೆಯ ವಿಚಾರವಾಗಿದೆ ಎಂದರು.
ನಬಾರ್ಡ್ ಡಿಜಿಎಂ ಜ್ಯೋತಿಷ್ ಜಗನ್ನಾಥ್ ಅವರು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಭದ್ರತಾ ಕೋಶವನ್ನು ಮಹಮ್ಮದ್ ನೌಶದ್, ಕೇಶ್ ಕೌಂಟರ್ ಅನ್ನು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಭದ್ರತಾ ಕೋಶವನ್ನು ಕಾಸರಗೋಡು ಎ.ಆರ್.ಜನರಲ್ ಜಯಚಂದ್ರನ್, ರುಪೇ ಕಾರ್ಡ್‍ನ್ನು ಕಾಸರಗೋಡು ಕೆ.ಡಿ.ಸಿ. ಬ್ಯಾಂಕ್ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಎ. ಡಿಜಿಟಲ್ ತಂತ್ರಜ್ಞಾನದ ಮೂಲಕ ವೇದಿಕೆಯಿಂದ ಉದ್ಘಾಟಿಸಿದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ವಾಶೆ ಶ್ರೀಕೃಷ್ಣ ಭಟ್, ಪಡಿಯಡ್ಪು ಶಂಕರ ಭಟ್, ಐತ್ತಪ್ಪ ಶೆಟ್ಟಿ ಕಡಾರು, ಕೋರಿಕ್ಕಾರು ವಿಷ್ಣು ಭಟ್, ಶ್ರೀಧರ ಪೈ ಬಳ್ಳಂಬೆಟ್ಟು ಅವರು ಬ್ಯಾಂಕ್‍ನ ಪ್ರಗತಿಯಲ್ಲಿ ಕಾರಣೀಭೂತರಾದ ಹಿರಿಯರ ಭಾವಚಿತ್ರಗಳನ್ನು ಅನಾವರಣಗೊಳಿಸಿದರು. ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಅವಿನಾಶ್ ವಿ.ರೈ, ಬದಿಯಡ್ಕ ಗ್ರಾಮಪಂಚಾಯತಿ ಸದಸ್ಯೆ ಪ್ರೇಮ ಕುಮಾರಿ, ಕಾಸರಗೋಡು ಎಸ್.ಸಿ.ಬ್ಯಾಂಕ್ ಅಧ್ಯಕ್ಷ ಎಸ್.ಜೆ.ಪ್ರಸಾದ್, ಬದಿಯಡ್ಕ ಪಂಚಾಯತಿ ಕೃಷಿಕರ ಅಭಿವೃದ್ದಿ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ರಮಣ ಸಿ ಶುಭಾಶಂಸನೆಗೈದರು. ಬ್ಯಾಂಕ್‍ನ ಕಾರ್ಯದರ್ಶಿ ಅಜಿತ ಕುಮಾರಿ ವರದಿಯನ್ನು ನೀಡಿದರು. ಸ್ಮರಣಸಂಚಿಕೆಯ ಸಂಪಾದಕ ಬಾಲ ಮಧುರಕಾನನ ಶತ ಸಹಕಾರ ಪಥದ ವಿವರಣೆಯನ್ನು ನೀಡಿದರು. ಬ್ಯಾಂಕ್‍ನ ಉಪಾಧ್ಯಕ್ಷ ದಿನೇಶ ಪ್ರಭು ಕರಿಂಬಿಲ ಸ್ವಾಗತಿಸಿ, ನಿರ್ದೇಶಕ ರಾಮಪ್ಪ ಮಂಜೇಶ್ವರ ವಂದಿಸಿದರು. ನಿರ್ದೇಶಕಿಯರಾದ ಸ್ವರ್ಣಲತಾ, ಜಯಂತಿ, ಪ್ರೇಮ ಕುಮಾರಿ ಪ್ರಾರ್ಥನಾಗೀತೆಯನ್ನು ಹಾಡಿದರು.
ಬಳಿಕ ವಿಚಾರಗೋಷ್ಠಿ ನಡೆಯಿತು. ಕಣ್ಣೂರು ಐಸಿಎಂ ಉಪನಿರ್ದೇಶಕ ನಿರಂಜನರಾಜ್ ಅರಸ್ ಅವರು ವ್ಯವಹಾರ ನಿರ್ವಹಣೆ-ಸುಲಭೋಪಾಯಗಳು ಮತ್ತು ವಿ.ಎನ್.ಬಾಬು ಅವರು ಸುಸ್ಥಿರ ಗ್ರಾಮ ವಿಕಾಸದಲ್ಲಿ ಸಹಕಾರಿ ಬ್ಯಾಂಕ್ ಗಳ ಪಾತ್ರ ವಿಷಯಗಳಲ್ಲಿ ಪ್ರಬಂಧ ಮಂಡನೆ ನಡೆಸಿದರು. ನಿವೃತ್ತ ಸಹಾಯಕ ರಿಜಿಸ್ಟಾರ್ ಕುಞÂಕಣ್ಣನ್ ಅವರು ಸಮನ್ವಯಕಾರರಾಗಿ ಸಹಕರಿಸಿದರು. ನಿವೃತ್ತ ಸಹಾಯಕ ರಿಜಿಸ್ಟಾರ್ ಐತ್ತಪ್ಪ ಮವ್ವಾರು, ಸಹಕಾರ ಭಾರತಿ ಅಖಿಲ ಭಾರತ ಕಾರ್ಯದರ್ಶಿ ಕರುಣಾಕರನ್ ನಂಬ್ಯಾರ್, ಎಡನಾಡು ಕಣ್ಣೂರು ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಭಟ್ ಎಚ್ ಉಪಸ್ಥಿತರಿದ್ದರು.,ಗಣಪತಿ ಪ್ರಸಾದ್ ಕೆ ಸ್ವಾಗತಿಸಿದರು. ರವಿಕಾಂತ ಕೇಸರಿ ಕಡಾರು ಕಾರ್ಯಕ್ರಮ ನಿರೂಪಿಸಿದರು.