ಮುಳ್ಳೇರಿಯ : ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಸಂಘ ಮುಳ್ಳೇರಿಯ ಇದರ ವತಿಯಿಂದ ಯಕ್ಷಗಾನ ಕಲಾವಿದ ಯತೀಶ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭವು ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಹಿರಿಯ ಅರ್ಥಧಾರಿಗಳಾದ ಬೆಳ್ಳಿಗೆ ನಾರಾಯಣ ಮಣಿಯಾಣಿಯವರು ಅಭಿನಂದಿಸಿ ಮಾತನಾಡಿ, ಸಂಘದ ಸಕ್ರಿಯ ಸದಸ್ಯರಾಗಿರುವ ಶ್ರೀಯುತರು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿಗೊಂಡಿರುವುದು ನಮಗೆಲ್ಲರಿಗೂ ಬಹಳ ಸಂತೋಷವನ್ನುಂಟು ಮಾಡಿದೆ. ಜೀವನದಲ್ಲಿ ಇನ್ನೂ ಹೆಚ್ಚಿನದ್ದನ್ನು ಅವರು ಸಾಧಿಸಲಿ ಎಂದು ಶುಭ ಹಾರೈಸಿದರು.
ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಎಂ.ಎಸ್ ಹರಿಪ್ರಸಾದ್, ಉದ್ಯಮಿ ರಮಾನಂದ ರಾವ್, ಯುವ ಅರ್ಥಧಾರಿ ಚಂದ್ರಶೇಖರ ಭಟ್ ಪಾರ್ತಕೊಚ್ಚಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದ ಸಂಘದ ಸದಸ್ಯ, ನೂತನ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈಯವರ ಸುಪುತ್ರ ರಿತೇಶ್ ಕುಮಾರ್ ರೈಯವರನ್ನು ಅಭಿನಂದಿಸಲಾಯಿತು. ರಿತೇಶ್ ಕುಮಾರ್ ರೈಯವರು ಮಾತನಾಡಿ ತನಗೆ ನೀಡಿದ ಗೌರವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಜಯಂತ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾಕುಮಾರಿ ಪ್ರಾರ್ಥನಾಗೀತೆ ಹಾಡಿದರು. ಉದಯರಾಜ ಅರಳಿತ್ತಾಯ ಸ್ವಾಗತಿಸಿ, ರತ್ನಾಕರ ಅಂಬಿಕಾನಗರ ವಂದಿಸಿದರು.