ಕಾಸರಗೋಡು: ಜಿಲ್ಲೆಯಲ್ಲಿ ಕಡಲ್ಕೊರೆತ ತಲೆದೋರಿರುವ ಪ್ರದೇಶಗಳಲ್ಲಿ ಪುನರ್ ನಿವಾಸ ಶಿಬಿರ ಸಹಿತ ತುರ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಇ.ಚಂದ್ರಶೇಖರನ್ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ.
ಕಡಲ್ಕೊರೆತ ತೀವ್ರವಾಗಿರುವ ಮುಸೋಡಿ ಕರಾವಳಿಗೆ ಸಚಿವ ಶನಿವಾರ ಭೇಟಿ ನೀಡಿದರು.
ಕಡಲ್ಕೊರೆತ ಪ್ರದೇಶಗಳ ನಿವಾಸಿಗಳನ್ನು ಅಗತ್ಯವಿದ್ದರೆ ಪುನರ್ ನಿವಾಸ ಕೇಂದ್ರಗಳಿಗೆ ಸ್ಥಳಾಂತರಿಸುವವೇಲೆ ಅವರಿಗೆ ಉತ್ತರ ಭೋಜನ ವ್ಯವಸ್ಥೆ ಒದಗಿಸಬೇಕು ಎಂದು ಭೇಟಿ ವೇಳೆ ಜೊತೆಗಿದ್ದ ಜಿಲ್ಲಾಧಿಕಾರಿಗೆ ಸಚಿವ ಆದೇಶ ನೀಡಿದ್ದಾರೆ.
ಶಿಬಿರಗಳಲ್ಲಿ ತಂಗಿರುವ ಮಂದಿಯ ಆರೋಗ್ಯ ಸುರಕ್ಷೆಯನ್ನು ಖಚಿತಪಡಿಸಬೇಕು. ಇವರಿಗಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸುವಂತೆ ಆರೋಗ್ಯ ಸಚಿವರೂ ಆದೇಶ ನೀಡಿದ್ದಾರೆ. ಸಂಕಷ್ಟದಲ್ಲಿರುವ ಮೀನುಗಾರರಿಗೆ ಉಚಿತ ಪಡಿತರ ಸಾಮಗ್ರಿ ವಿತರಿಸಲಾಗುವುದು ಎಂದು ಸಚಿವ ಹೇಳಿದರು.
ಕರಾವಳಿಯಲ್ಲಿ ತುರ್ತು ಸಂದರ್ಭ ಸಂರಕ್ಷಣೆಗೆ ಬಳಸಲಾಗುವ ಜಿಯೋ ಬ್ಯಾಗ್ ನಂಥ ತಾತ್ಕಾಲಿಕ ಸೌಲಭ್ಯಗಳನ್ನು ಏರ್ಪಡಿಸಲಾಗುವುದು. ಇದಕ್ಕಾಗಿ ಜಿಲ್ಲೆಗೆ ಒಂದು ಕೋಟಿ ರೂ. ಮಂಜೂರು ಮಾಡಲಾಗುವುದು. ದೀರ್ಘ ಅವಧಿ ತಳಹದಿಯಲ್ಲಿ ಪ್ರಕಾರ 12 ಕೋಟಿ ರೂ. ನ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದು.ನೀರಾವರಿ ಇಲಾಖೆಗೆ ಈ ಹೊಣೆ ನೀಡಲಾಗಿದೆ ಎಂದು ಸಚಿವ ಹೇಳಿದರು.
ಮನೆ ಮತ್ತು ಜಾಗ ರಹಿತರಾದವರಿಗೆ ಮೂರು ಸೆಂಟ್ ಜಾಗ ಖರಿದಿಗೆ 6 ಲಕ್ಷ ರೂ. ಮೀನುಗಾರಿಕೆ ಇಲಾಖೆ ನೀಡಲಿದೆ. ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಯ ಸಹಾಯ ಸಹಿತ 4 ಲಕ್ಷ ರೂ. ಮನೆ ನಿರ್ಮಾಣಕ್ಕೆ ನೀಡಲಾಗುವುದು ಎಂದು ಸಚಿವ ಚಂದ್ರಶೇಖರನ್ ಹೇಳಿದರು.
ಮನೆ ಪೂರ್ಣ ರೂಪದಲ್ಲಿ ಹಾನಿಗೊಂಡವರಿಗೆ ಮನೆ ನಿರ್ಮಾಣಕ್ಕೆ 4 ಲಕ್ಷ ರೂ. ಸರಕಾರ ನೀಡಲಿದೆ ಎಂದು ಸಚಿವರು ತಿಳಿಸಿರುವರು.