ಬಿಶ್ಕೇಕ್: ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳು ಖಂಡಿತಾ ಜವಾಬ್ದಾರಿಯುತವಾಗಿರಬೇಕು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.
ಕಿರ್ಗಿಸ್ತಾನದ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (ಎಸ್ ಸಿಒ)ಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಎಸ್ ಸಿಒ ಶೃಂಗದ ಖಾಯಂ ಸದಸ್ಯತ್ವ ಪಡೆದು 12 ವರ್ಷಗಳಾಗುತ್ತಿವೆ. ಎಸ್ ಸಿಒದ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲೂ ನಾವು ಸಕಾರಾತ್ಮಕ ಕೊಡುಗೆ ನೀಡಿದ್ದೇವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎಸ್ ಸಿಒ ಪಾತ್ರ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಏತನ್ಮಧ್ಯೆ ಚೀನಾದ ಪ್ರಧಾನಿ ಕ್ಸಿ ಜಿನ್ ಪಿಂಗ್ ಜೊತೆಗಿನ ನಿಯೋಗ ಮಟ್ಟದ ಮಾತುಕತೆಯ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, "ಶಾಂತಿಯುತ ಮಾತುಕತೆಗಳಿಗೆ ನಾವು ಬದ್ಧರಾಗಿದ್ದೇವೆ" ಮತ್ತು ಈ ಪ್ರಯತ್ನದಲ್ಲಿ ಭಾರತ ಮುಂದಡಿ ಇಟ್ಟಿದೆ, ಆದರೆ "ಈ ಪ್ರಯತ್ನಗಳು ಪಾಕಿಸ್ತಾನದಿಂದ ಹಳಿತಪ್ಪಿದೆ. ಮೊದಲು ಪಾಕಿಸ್ತಾನ ಭಯೋತ್ಪಾದನಾ ಮುಕ್ತ ವಾತಾವರಣ ಸೃಷ್ಟಿಸಬೇಕು ಎಂದು ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಅವರಿಗೆ ತಿಳಿಸಿದರು.
'ಈ ಹಂತದಲ್ಲಿ ನಾವು ಇದನ್ನು ನೋಡಲು ಸಾಧ್ಯವಾಗಿಲ್ಲ. ಹಾಗಾಗಿ, ಭಾರತವು ಪ್ರಸ್ತಾಪಿಸಿದ ಎಲ್ಲ ವಿಷಯಗಳ ಬಗ್ಗೆ ಪಾಕಿಸ್ತಾನ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಥಿರವಾಗಿದೆ ಮತ್ತು ಶಾಂತಿಯುತ ದ್ವಿಪಕ್ಷೀಯ ಕಾರ್ಯವಿಧಾನದ ಮೂಲಕ ಎಲ್ಲ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಮೋದಿ ಹೇಳಿದರು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗಾರರಿಗೆ ತಿಳಿಸಿದರು.
ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸೇರಿದಂತೆ ಎಸ್‍ಸಿಒ ನಾಯಕರೊಂದಿಗೆ ಔಪಚಾರಿಕವಾಗಿ ಭಾವಚಿತ್ರ ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡರು. ಕಿರ್ಗಿಸ್ತಾನದ ಗಣರಾಜ್ಯ ಅಧ್ಯಕ್ಷ ಜೀನ್ ಬೆಕೋವ್ ಅವರು ಪ್ರಸಕ್ತ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.
ಬಳಿಕ ಇರಾನ್ ಅಧ್ಯಕ್ಷ ಡಾ ಹಸನ್ ರೂಹಾನಿ ಅವರೊಂದಿಗೆ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ, ಮಾಂಗೋಲಿಯಾ ಅಧ್ಯಕ್ಷ ಖಾಲ್ತಾಮಜಿನ್ ಬ್ಯಾಟುಗಲ್ ಮತ್ತು ಕಝಕಿಸ್ತಾನ್ ಅಧ್ಯಕ್ಷ ಕಾಸಿಮ್ ಜಾರ್ಮಾಟ್ ಅವರೊಂದಿಗೂ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.