ಬದಿಯಡ್ಕ: ಹಲಸು ಇಂದು ರಾಜ್ಯದಲ್ಲಿ ಶ್ರೇಷ್ಠಸ್ಥಾನವನ್ನು ಅಲಂಕರಿಸಿದ ಕಲ್ಪವೃಕ್ಷವಾಗಿದೆ. ಒಂದು ಕಾಲದಲ್ಲಿ ಬಡವರ ಪಾಲಿನ ಆಹಾರವಾದ ಹಲಸು ಇಂದು ಶ್ರೀಮಂತ ಸ್ಥಾನದಲ್ಲಿ ನೆಲೆನಿಂತಿದೆ. 33 ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಗೆ ಮೇವನ್ನು ನೀಡುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವು ಪುಣ್ಯಪ್ರದವಾದ ಕೆಲಸವಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿನ ಉದ್ದೇಶದಿಂದ ಮುಳ್ಳೇರಿಯ ಹವ್ಯಕ ಮಂಡಲದ ಶಿಷ್ಯವೃಂದದವರ ನೇತೃತ್ವದಲ್ಲಿ, ಗೋಭಕ್ತರ ಹಾಗೂ ಬದಿಯಡ್ಕ ಮಹಿಳೋದಯದ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ಆಯೋಜಿಸಲಾದ `ಹಲಸು ಮೇಳ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕರ ಪಾಲಿನ ಆಪತ್ಭಾಂದವನಾದ ಹಲಸು ಇಂದು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಇಂತಹ ಕಾರ್ಯಕ್ರಮಗಳು ಔಚಿತ್ಯಪೂರ್ಣವಾಗಿದೆ ಎಂದರು.
ನಿವೃತ್ತ ಉಪ ನೋಂದಣಾಧಿಕಾರಿ ಮುಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮನುಷ್ಯ, ಗೋವು, ಹಲಸು ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ. ಮನೆಕಟ್ಟುವ ಮೊದಲ ಹಂತದಲ್ಲಿ ಹಲಸಿನ ತುಂಡನ್ನು ನಾವು ಉಪಯೋಗಿಸುತ್ತೇವೆ. ಮನೆ ಕಟ್ಟಿದ ನಂತರವೂ ಮನೆಯ ಮುಂಭಾಗದಲ್ಲಿ ಹಲಸು ಇರುವುದು ಸರ್ವೇಸಾಮಾನ್ಯವಾಗಿದೆ. ನಶಿಸಿ ಹೋಗುವ ಸಂಪ್ರದಾಯಕ್ಕೆ ಹೊಸ ಮೆರಗನ್ನು ನೀಡಿ ಹವ್ಯಕ ಸಮುದಾಯದ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವು ಶ್ಲಾಘನೀಯವಾಗಿದೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿಯೂ ಹಲಸಿನ ಹಣ್ಣನ್ನು ಎಲ್ಲರೂ ಉಪಯೋಗಿಸುವಂತಾಗಬೇಕು ಎಂದ ಅವರು ಹಲಸಿನ ಪುನಶ್ಚೇತನಕ್ಕೆ ಈ ಕಾರ್ಯಕ್ರಮವು ಕಾರಣವಾಗಲಿ ಎಂದರು.
ಶ್ರೀರಾಮಚಂದ್ರಾಪುರಮಠದ ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಹಲಸು ಮೇಳಗಳು ನಮಗೆ ಸ್ಪೂರ್ತಿದಾಯಕವಾಗಿದೆ. ಪ್ರಕೃತಿಯಲ್ಲಿ ನಮಗೆ ಪೂರಕವಾದ ಅಂಶಗಳು ಪ್ರಕೃತಿದತ್ತವಾಗಿ ನಿರ್ಮಾಣವಾಗಿದ್ದರೂ ನಾವು ಅದನ್ನು ಗಮನಿಸುವುದಿಲ್ಲ. ಪ್ರತಿಯೊಂದು ವಸ್ತುವು ಪ್ರತಿಯೊಂದು ಜೀವಿಗೂ ಪರಸ್ಪರ ಪೂರಕವಾಗಿ ಆಹಾರರೂಪದಲ್ಲಿ ಹಾಗೂ ವಸ್ತುರೂಪದಲ್ಲಿ ನಮಗೆ ಒದಗಿಬರುತ್ತಿದೆ. ಈಗಾಗಲೇ ಹಲಸು ಕೇರಳ ರಾಜ್ಯದ ಫಲವೆಂದು ಅಂಗೀಕಾರವಾಗಿದೆ. ಹಲಸಿನಲ್ಲಿ ನಿರುಪಯುಕ್ತ ವಸ್ತುವೆಂಬುದಿಲ್ಲ. ಗೋವಿಗಾಗಿ ಹಮ್ಮಿಕೊಂಡ ಕಾರ್ಯಕ್ರಮವಿದಾಗಿದ್ದು ಹಲಸಿನ ಮೌಲ್ಯವರ್ಧನೆಗೆ ಕಾರಣವಾಗಿದೆ. ಹಲಸಿನ ಒಂದು ಕರೆಗೆ ಎಲ್ಲೆಡೆ ಒಂದು ತಿಂಗಳ ಕಾಲ ಹಲಸಿನ ಹಪ್ಪಳದ ಸಪ್ಪಳ ಕೇಳಿಬಂದಿದೆ. ಇದು ಇತರರಿಗೂ ಸ್ಪೂರ್ತಿಯಾಗಿ ಹಲಸಿನ ಸದ್ದು ಎಲ್ಲೆಡೆ ಮೊಳಗಲಿ, ಗೋಮಾತೆಯ ಚರಣಾರವಿಂದಕ್ಕೆ ಈ ಹಲಸು ಮೇಳ ಸಮರ್ಪಣೆಯಾಗಲಿ ಎಂದರು.
ವೇದಿಕೆಯಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ದಿಗ್ದರ್ಶಕ ಬಿ.ಜಿ. ರಾಮ ಭಟ್ ಗೋಳಿತ್ತಡ್ಕ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಡಾ. ವೈ.ವಿ.ಕೃಷ್ಣಮೂರ್ತಿ, ಕುಸುಮ ಪೆರ್ಮುಖ, ಜಯಪ್ರಕಾಶ ಪಜಿಲ, ಕಾಸರಗೋಡು ಸಿಪಿಸಿಆರ್ಐಯ ವಿಜ್ಞಾನಿ ಡಾ. ಸರಿತಾ ಹೆಗ್ಡೆ, ವೆಂಕಟಕೃಷ್ಣ ಶರ್ಮ ಮುಳಿಯ ಉಪಸ್ಥಿತರಿದ್ದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಹಲಸು ಮೇಳದ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ ವಂದಿಸಿದರು. ಶಂಕರ ಪ್ರಸಾದ ಕುಂಚಿನಡ್ಕ, ಗುರುಮೂರ್ತಿ ನಾಯ್ಕಾಪು, ಚಂದ್ರಶೇಖರ ಏತಡ್ಕ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಣೆಗೈದರು. ಪ್ರಾರಂಭದಲ್ಲಿ ಶಿಷ್ಯವೃಂದದವರೆಲ್ಲ ಜೊತೆಗೂಡಿ ಗುರುವಂದನೆಯೊಂದಿಗೆ ಶ್ರೀಗುರುಗಳಿಗೆ ಚರಣಕಾಣಿಕೆಯನ್ನು ಸಮರ್ಪಿಸಿದರು.
ವೇದಿಕೆಯಲ್ಲಿ :
* ಹಲಸಿನ ಕಾಯಿ ಹಾಗೂ ಹಲಸಿನ ಉತ್ಪನ್ನಗಳಿಂದ ರಚಿಸಿದ ಚಿತ್ರಣಗಳು ವೇದಿಕೆಯಲ್ಲಿ ಗಮನಸೆಳೆದವು.
* ಹಲಸಿನ ಹಣ್ಣಿನ ಸೊಳೆಯನ್ನು ಪುಟ್ಟ ಬಾಲಕನಿಗೆ ನೀಡುವ ಮೂಲಕ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು.
* ಗೋಮಾತೆಗಾಗಿ ಹಪ್ಪಳ ಸಮರ್ಪಣೆ ನಡೆಯಿತು.
* ಹಪ್ಪಳ ಖರೀದಿಯನ್ನು ನಿವೃತ್ತ ಉಪನೋಂದಣಾಧಿಕಾರಿ ಮುಹಮ್ಮದಾಲಿ ಪೆರ್ಲ ನಿರ್ವಹಿಸಿದರು.
* ವೇದಿಕೆಯಲ್ಲಿ ಹಲಸಿನ ಕಾಯಿಯಿಂದ ನಿರ್ಮಿಸಲಾದ `ಶಿವಲಿಂಗ'ದ ಪ್ರತಿರೂಪ ಜನರನ್ನು ತನ್ನತ್ತ ಆಕರ್ಷಿಸುತ್ತಿತ್ತು.
* ಬೆಳಗ್ಗೆ 11 ಗಂಟೆಯ ವೇಳೆಗೆ 2000 ಮಂದಿ ನೊಂದಾವಣೆ ಮಾಡಿದ್ದರು.
* ಸಿಪಿಸಿಆರ್ಐಯ ವಿಜ್ಞಾನಿ ಡಾ. ಸರಿತಾ ಹೆಗ್ಡೆ ಹಾಗೂ ವೆಂಕಟಕೃಷ್ಣ ಶರ್ಮ ಮುಳಿಯ ಕಾರ್ಯಾಗಾರವನ್ನು ನಡೆಸಿಕೊಟ್ಟರು.
(ಚಿತ್ರ ಮಾಹಿತಿ: ಪುಟ್ಟ ಬಾಲಕನಿಗೆ ಹಲಸಿನ ಹಣ್ಣಿನ ಸೊಳೆಯನ್ನು ನೀಡಿ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ವಿತರಿಸಿ ಹಲಸು ಮೇಳವನ್ನು ಉದ್ಘಾಟಿಸಿದರು,ಮತ್ತು ಹಲಸುಮೇಳವನ್ನು ಉದ್ಘಾಟಿಸಿ ಕೆ.ಎನ್.ಕೃಷ್ಣ ಭಟ್ ಮಾತನಾಡುತ್ತಿರುವುದು, 2)ಶಿವಪ್ರಸಾದ ವರ್ಮುಡಿ ಅವರಿಗೆ ಹಪ್ಪಳದ ಪ್ಯಾಕೆಟ್ ನೀಡುವ ಮೂಲಕ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಸಮಸ್ತ ಗೋಭಕ್ತರ ಪರವಾಗಿ ಹಪ್ಪಳ ಸಮರ್ಪಣೆ ಮಾಡಿದರು ಮತ್ತು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನತೆ.)