ಪಾಟ್ನಾ: ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವನ್ ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಾಸ್ವಾನ್ ರಾಜ್ಯಸಭೆಗೆ ಆಯ್ಕೆಯಾಗಿರುವುದನ್ನು ಬಿಹಾರ ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಬತೇಶ್ವರ್ ನಾಥ್ ಪಾಸ್ವಾನ್ ಆಯ್ಕೆಯನ್ನು ಘೋಷಿಸಿದ್ದು, ಅವರ ಕೈಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಹಿರಿಯ ಎನ್ ಡಿಎ ನಾಯಕರ ಸಮ್ಮುಖದಲ್ಲಿ ಚುನಾಯಿತ ಪ್ರಮಾಣ ಪತ್ರವನ್ನು ಪಾಸ್ವನ್ ಅವರಿಗೆ ನೀಡಲಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ರವಿಶಂಕರ್ ಪ್ರಸಾದ್ ರಾಜೀನಾಮೆ ಅಗತ್ಯವಾಗಿದ್ದು, ಲೋಕಜನ ಶಕ್ತಿ ಪಾರ್ಟಿ ಮುಖ್ಯಸ್ಥ ಪಾಸ್ವನ್ ಇದೀಗ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. 1960ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಶಾಸಕರಾಗಿ ರಾಜಕೀಯ ಆರಂಭಿಸಿದ ಪಾಸ್ವಾನ್ ಎರಡನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಜೆಡಿಯು ಹಾಗೂ ಲೋಕಸಭಾ ಜನಶಕ್ತಿ ಪಕ್ಷದ ಸೀಟು ಹೊಂದಾಣಿಕೆ ಯೋಜನೆಯಂತೆ ರಾಜ್ಯಸಭೆಗೆ ಪಾಸ್ವಾನ್ ಅವರನ್ನು ಆಯ್ಕೆಮಾಡಲಾಗಿದೆ.