ಕುಂಬಳೆ: ಜನಸಾಮಾನ್ಯರ ಜ್ಞಾನದಾಹವನ್ನು ಪೂರೈಸುವಲ್ಲಿ ಸರಕಾರಿ-ಅನುದಾನಿತ ಶಾಲೆಗಳ ಪಾತ್ರ ಮಹತ್ತರವಾದುದು. ಸಂಸ್ಕಾರ ಕಲಿಸುವ, ಜೀವನ ಪಥದ ಮಾರ್ಗ ತೋರಿಸುವ ಶಿಕ್ಷಣ ವ್ಯವಸ್ಥೆ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ ಪುಟಾಣಿಗಳ ಸರ್ವಾಂಗೀಣ ಅಭಿವೃದ್ದಿಗೆ ದಾರಿದೀಪಗಳಾಗಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಜೂ.ಶಂಕರ್ ಅವರು ತಿಳಿಸಿದರು.
ನಾಯ್ಕಾಪು ಸಮೀಪದ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಪರಾಹ್ನ ಆಯೋಜಿಸಲಾದ ಎಂಟನೇ ವರ್ಷದ ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಬೆಳೆಯುವಲ್ಲಿ ಸ್ಥಳೀಯರ ನೆರವು ಮಹತ್ವಪೂರ್ಣದ್ದಾಗಿದ್ದು, ವ್ಯಾಪಕ ಸ್ಪರ್ಧಾ ಕಾಲಘಟ್ಟವಾದರೂ ಮುನ್ನಡೆಸುವ ಹೊಣೆಯನ್ನು ನಿಭಾಯಿಸುವ ಅಗತ್ಯ ಇದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳ ಶಾಲಾ ಶಿಕ್ಷಣದ ಜೊತೆಗೆ ಬಹುಮುಖಿ ಚಟುವಟಿಕೆಗಳನ್ನು ಅಭ್ಯಸಿಸುವ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಗಮನ ನೀಡಬೇಕೆಂದು ಅವರು ಕರೆನೀಡಿದರು.
ಶಾಲಾ ವ್ಯವಸ್ಥಾಪಕ ಡಾ.ಕೆ.ವಿ.ತೇಜಸ್ವಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಪುಟಾಣಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನ ಹಿರಿಯ ತಲೆಮಾರಿನ ಪ್ರಜ್ಞಾವಂತ ಹಿರಿಯ ನಾಗರಿಕರ ದೂರದೃಷ್ಟಿಯ ಫಲವಾಗಿ ವಿವಿಧಡೆಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದು ಈ ಮಣ್ಣಿನ ಹೆಮ್ಮೆಯ ವಿಚಾರವಾಗಿ ಪುಳಕಗೊಳಿಸುತ್ತದೆ. ಆದರೆ ಇಂದು ಶಿಕ್ಷಣ ವ್ಯವಸ್ಥೆ ವ್ಯಾಪಾರಿ ಸರಕಾಗಿ ನೈಜ ಶಿಕ್ಷಣಕ್ಕೆ ಸವಾಲಾಗಿರುವುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾದಾನವು ಇತರ ಎಲ್ಲಾ ದಾನಗಳಿಗಿಂತ ಶ್ರೇಷ್ಠವೆಂದು ಸಾರಿದ ಭಾರತೀಯ ಸಂಸ್ಕøತಿಯ ಶಿಕ್ಷಣ ದೃಷ್ಟಿ ಅತ್ಯಪೂರ್ವವಾದುದು. ಸಾಂಸ್ಕøತಿಕ, ಸಾಹಿತ್ತಿಕ ಶ್ರೀಮಂತಿಕೆಯ ಸಮಾಜವಾಗಿ ಬೆಳೆದುಬಂದಿರುವ ನಮಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೂಲಕ ಉದ್ದೇಶಿತ ಗುರಿ ತಲಪಲು ಸಾಧ್ಯವಿದೆ ಎಂದು ತಿಳಿಸಿದರು. ಆದರ್ಶಯುತರಾಗಿ ಸಾಮಾಜಿಕ ಕಳಕಳಿಯೊಂದಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ಮನಸ್ಸು ಮೂಡಿಬರಲಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೇರಳ ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಪನ್ ಡಿಸೋಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಉಪಸ್ಥಿತರಿದ್ದು ಶುಭಹಾರೈಸಿದರು. ಮುಖ್ಯೋಪಾಧ್ಯಾಯಿನಿ ಮೇಬಲ್ ಮರೀಟ ಡಿಸೋಜ ಸ್ವಾಗತಿಸಿ, ಶಿಕ್ಷಕ ಸುಕೇಶರಾಮ್ ಡಿ. ವಂದಿಸಿದರು. ಶಾಲಾ ಅಡಳಿತ ಮಂಡಳಿ ಸದಸ್ಯ ಗೋಪಾಲಕೃಷ್ಣ ಭಟ್ ನಿರೂಪಿಸಿದರು.