ವಾಣೀನಗರ ಹೈಯರ್ ಸೆಕೆಂಡರಿ ಶಾಲೆ ಪ್ರವೇಶೋತ್ಸವ ಸಮಾರಂಭದಲ್ಲಿ
ಪೆರ್ಲ:ಕೇರಳ ತುತ್ತ ತುದಿ, ಕಾಸರಗೋಡು ಗಡಿ ಭಾಗದ ವಾಣೀನಗರ ಸರಕಾರಿ ಶಾಲೆ ಕಳೆದ ಶೈಕ್ಷಣಿಕ ವರ್ಷವೂ ಸೇರಿ ಸತತ ನಾಲ್ಕನೇ ಬಾರಿ ಶೇ.100 ಫಲಿತಾಂಶ ಪಡೆದಿರುವುದು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲೂ ಉತ್ತಮ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂಬುದಕ್ಕೆ ನಿದರ್ಶನ ಎಂದು ಹಿರಿಯ ಅಧ್ಯಾಪಕ ಬಟ್ಯ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲಾ ಪ್ರವೇಶೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ಜನರು ಶಿಕ್ಷಣದಿಂದ ವಂಚಿತರಾಗಿ ಉಳಿದಿದ್ದರು.ಹಳ್ಳಿಯ ಮಕ್ಕಳನ್ನು ವಿದ್ಯಾ ಸಂಪನ್ನರಾಗಿಸುವ ಉದ್ದೇಶದಿಂದ ಶಿಕ್ಷಣ ಪ್ರೇಮಿಗಳು ಗ್ರಾಮೀಣ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಪೇಟೆಯ ಶಾಲೆಗಳಲ್ಲಿ ಮಾತ್ರ ಉತ್ತಮ ಮಟ್ಟದ ಶಿಕ್ಷಣ ಲಭಿಸುವುದು, ಅಲ್ಲಿ ಕಲಿತ ಮಕ್ಕಳು ಹಳ್ಳಿ ಮಕ್ಕಳಿಗಿಂದ ಚುರುಕಾಗಿರುತ್ತಾರೆ ಎಂಬ ಧೋರಣೆಯಲ್ಲಿ ಆರ್ಥಿಕ ಸಬಲರು ತಮ್ಮ ಮಕ್ಕಳನ್ನು ದೂರದ ಪೇಟೆಯ ಶಾಲೆಗಳಿಗೆ ಸೇರಿಸುತ್ತಿದ್ದರು. ಹಳ್ಳಿ ಪ್ರದೇಶದ ಸ್ವಚ್ಛಂದ ವಾತಾವರಣದ ಶಾಲೆಗಳಲ್ಲಿ ವಿದ್ಯೆ ಕಲಿತು ಅದೆಷ್ಟೋ ಪ್ರತಿಭಾನ್ವಿತರು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿದ್ದಾರೆ ಎಂದು ಅವರು ತಿಳಿಸಿದರು.
ಎಣ್ಮಕಜೆ ಗ್ರಾ.ಪಂ. ಸದಸ್ಯೆ ಶಶಿಕಲ ವೈ. ದೀಪ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಒಂಭತ್ತನೇ ತರಗತಿ ವಿದ್ಯಾರ್ಥಿ ಹರ್ಷ ಮುಖ್ಯಮಂತ್ರಿ ಅವರ ಪ್ರವೇಶೋತ್ಸವ ಸಂದೇಶ ಓದಿದರು.ಮಿಲೇನಿಯಂ ಕ್ಲಬ್ ವತಿಯಿಂದ ಒಂದನೇ ತರಗತಿ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
ಗ್ರಾ.ಪಂ. ಸದಸ್ಯೆ ಚಂದ್ರಾವತಿ, ಸ್ಥಳೀಯ ಮಿಲೇನಿಯಂ ಕ್ಲಬ್ ಸದಸ್ಯರು, ಮಕ್ಕಳ ಪೋಷಕರು, ಊರವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ನಾಗರತ್ನ ವಂದಿಸಿದರು. ಶಿಕ್ಷಕಿ ಸರಸ್ವತಿ ನಿರೂಪಿಸಿದರು.
ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳು, ರಕ್ಷಕರು ಹಿರಿಯ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಮಿಲೇನಿಯಂ ಕ್ಲಬ್ ಸದಸ್ಯರನ್ನೊಳಗೊಂಡ ಮೆರವಣಿ ಪ್ರವೇಶೋತ್ಸವ ಸಮಾರಂಭಕ್ಕೆ ಹೊಸ ಮೆರುಗು ನೀಡಿತು.ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.