ಪೆರ್ಲ: ಬಾಲ್ಯ ಕಾಲದಲ್ಲಿ ಪಡೆವ ಶಿಕ್ಷಣ ಬದುಕನ್ನು ರೂಪಿಸುತ್ತದೆ. ಕಲಿತ ವಿದ್ಯೆ ಶಾಶ್ವತವಾದ ಸಂಪತ್ತು. ಹಳ್ಳಿಯ ಮೂಲೆಯಲ್ಲಿ ಕಲಿತರೂ ಜಗತಿನೆಲ್ಲೆಡೆ ಹೋಗಿ ಉದ್ಯೋಗ ಸಂಪಾದಿಸಬಹುದು. ಮಾನವೀಯ ಗುಣ ಬೆಳೆಸಿ ಸಮಾಜದ ಅಭಿವೃಧ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಪೆರಡಾಲ ಸರಕಾರಿ ಶಾಲಾ ಅಧ್ಯಾಪಕ ಶ್ರೀಧರ ಭಟ್ ನಲ್ಕ ನುಡಿದರು.
ನಲ್ಕ ಬಿರ್ಮೂಲೆಯ ಅಕ್ಷಯ ಯುವಕ ಮಂಡಲ ವತಿಯಿಂದ ಹತ್ತನೇ ತರಗತಿ ಉತ್ತೀರ್ಣಗೊಂಡ ಮಕ್ಕಳಿಗೆ ನೋಟ್ ಪುಸ್ತಕಗಳ ಕಿಟ್ ವಿತರಿಸಿ ಮಾತನಾಡಿದರು.
ಕಳೆದ ಒಂಭತ್ತು ವರ್ಷಗಳಿಂದ ಯುವಕ ಮಂಡಲ ನಡೆಸುವ ಈ ಮಹತ್ಕಾರ್ಯ ಶ್ಲಾಘನೀಯ. ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಕಾರಿ. ಸಂಘಟನೆಗಳು ಇಂತಹ ಸಮಾಜಮುಖಿ ಕಾರ್ಯ ಮುಂದುವರಿಸಲಿ ಎಂದು ಅವರು ಹಾರೈಸಿದರು. ಮಹಮ್ಮದ್ ನಲ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಯುವಕ ಮಂಡಲದ ಅಧ್ಯಕ್ಷ ಶಶಿಧರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.ಅಕ್ಷಯ ಯುವಕ ಮಂಡಲದ ವಿನೋದ್ ಸ್ವಾಗತಿಸಿ, ಸದಾನಂದ ವಂದಿಸಿದರು. 15 ಮಕ್ಕಳು ಯೋಜನೆಯ ಪ್ರಯೋಜನ ಪಡೆದರು.