ಪೆರ್ಲ: ಶಿಕ್ಷಣ ಮತ್ತು ಭೌತಿಕ ಸಂಪತ್ತುಗಳನ್ನು ಪಡೆಯುವುದರ ಜೊತೆಯಲ್ಲಿ ಸಂಸ್ಕಾರ, ಸಂಸ್ಕøತಿಗಳ ಮೌಲ್ಯಗಳನ್ನು ಅರಿತು ಜೀವನದಲ್ಲಿ ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನವಾಗುವುದು ಎಂದು ಕೇರಳ ರಾಜ್ಯ ಚಿನ್ಮಯ ಮಿಷನ್ ಕ್ಷೇತ್ರೀಯ ಮಖ್ಯಸ್ಥ ಶ್ರೀ ವಿವಿಕ್ತಾನಂದ ಸ್ವಾಮೀಜಿ ಹೇಳಿದರು.
ದಿ.ಗೌರು ಮಾಧವ ಭಟ್ ಸ್ಮಾರಕ ವಿವೇಕಾನಂದ ಶಿಶುಮಂದಿರ ಪೆರ್ಲ ಇದರ ಲೋಕಾರ್ಪಣೆಯನ್ನು ಇತ್ತೀಚೆಗೆ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ರ್ಯಾಂಕ್, ಸ್ಥಾನಮಾನ, ಬಿರುದು ಸನ್ಮಾನಗಳ ಕಡೆಗೆ ತಮ್ಮ ಶ್ರದ್ದೆಯನ್ನು ಕೇಂದ್ರೀಕರಿಸಿ ಒತ್ತಡದ ಬದುಕಿಗೆ ಅವರನ್ನು ತಳ್ಳಿ ಬಿಡುತ್ತಾರೆ. ಕೇವಲ ಬೌದ್ಧಿಕ ಹಾಗೂ ಲೌಕಿಕ ಶಿಕ್ಷಣದಿಂದ ಸ್ಥಿರ, ಸ್ಥಾಯಿ ಸಂಪತ್ತು, ಜೀವನದಲ್ಲಿ ಸಂತೃಪ್ತಿ ಪಡೆಯುವುದು ಅಸಾಧ್ಯ.
ಶಿಕ್ಷಣ ಸ್ಥಾನಮಾನಗಳ ಜತೆಯಲ್ಲೇ ಮೌಲ್ಯಯುತ ಸಂಸ್ಕಾರಗಳನ್ನು ರೂಢಿಸಲು ಕಲಿಸಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಹೊಳಪು ಕಾಣಬಹುದು. ಉದಾರ ತತ್ವಗಳು, ಜೀವನ ಸೈಲಿ, ವೈಚಾರಿಕ ದೃಷ್ಟಿಯ ತ್ರಿಮುಖ ಜೀವನ ಶೈಲಿಗಳನ್ನು ಅಳವಡಿಸಿದರೆ ಜೀವನದ ಉದ್ದೇಶ ಸಫಲ ಹಾಗೂ ಪರಮ ಪಾವನವಾಗಿ ಧನ್ಯತೆ ಪಡೆಯಬಹುದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ಬಾಲ್ಯದಿಂದಲೇ ಮಕ್ಕಳಿಗೆ ಜೀವನದ ಮೌಲ್ಯಗಳ ಅರಿವು ನೀಡಿ ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಶಿಶುಮಂದಿರಗಳು ಮಕ್ಕಳ ಗುಣ ನಡತೆಗಳನ್ನು ತಿದ್ದಿ ತೀಡುವ ಮಹಾಕಾರ್ಯ ನಿರ್ವಹಿಸುತ್ತವೆ.ವಿದ್ಯೆಯೊಂದಿಗೆ ಸಂಸ್ಕಾರವನ್ನು ಬೋಧಿಸುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಘನ ಕಾರ್ಯ ಶ್ಲಾಘನೀಯ ಎಂದರು.
ಪೆರ್ಲದ ನಾಲಂದಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆ ಉಪನ್ಯಾಸಕಿ ಡಾ. ಶೋಭಿತಾ ಸತೀಶ್, ನಾಲಂದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಶುಭ ಹಾರೈಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಖಿಲ ಭಾರತ ಕುಟುಂಬ ಪ್ರಭೋದನ್ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಶಾರೀರಿಕ ಮತ್ತು ಬುದ್ಧಿಯ ವಿಕಾಸಕ್ಕೆ ಪ್ರೇರಣೆ ಬಲು ಮುಖ್ಯ. ಶಿಶುಮಂದಿರದ ಶಿಕ್ಷಣ ಮಕ್ಕಳ ಮನಸ್ಸಿನಲ್ಲಿ ಆ ರೀತಿಯ ಪ್ರಥಮ ಪ್ರೇರಣೆ ಮೂಡಿಸುವುದು ಎಂದರು.
ಮಾ.ಭ.ಪೆರ್ಲ ಕುಟುಂಬ ಸದಸ್ಯರುಗಳಾದ ರಾಜರಾಂ ಪೆರ್ಲ, ಜಯಶ್ರೀ ಪೆರ್ಲ ಉಪಸ್ಥಿತರಿದ್ದರು. ಶಿಶುಮಂದಿರ ಸಮಿತಿ ಅಧ್ಯಕ್ಷ ಶ್ರೀಹರಿ ಭರಣೇಕರ್ ಸ್ವಾಗತಿಸಿ, ಲಾವಣ್ಯ ಮಾತಾಜಿ ವಂದಿಸಿದರು. ಜ್ಯೋತಿ ಮಾತಾಜಿ ನಿರೂಪಿಸಿದರು.