ಮುಳ್ಳೇರಿಯ: ಪನೆಯಾಲ ಶ್ರೀವನಶಾಸ್ತಾರ ಮತ್ತು ಪರಿವಾರ ಶಕ್ತಿಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬುಧವಾರ ಆರಂಭಗೊಂಡಿದ್ದು, ಇಂದು(ಶುಕ್ರವಾರ) ಬ್ರಹ್ಮಕಲಶಾಭಿಷೇಕದೊಂದಿಗೆ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ 4.30ರಿಂದ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ ನೆರವೇರಿತು. ಸಂಜೆ 5ಕ್ಕೆ ಕ್ಷೇತ್ರಕ್ಕೆ ತಂತ್ರವರ್ಯರಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ರವೀಶ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, 6 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಂತ ಕಾರ್ಯಕ್ರಮಗಳು ನಡೆಯಿತು. ಬಳಿಕ ಬೀಜದಕಟ್ಟೆಯ ಶ್ರೀಶಾಸ್ತಾರ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು.
ಗುರುವಾರ ಬೆಳಿಗ್ಗೆ 5 ರಿಂದ ಗಣಪತಿಹೋಮ, ಪ್ರಾಯಶ್ಚಿತ ಹೋಮ, ತತ್ವಹೋಮ, ತತ್ವ ಕಲಶ ಪೂಜೆ, ಕುಂಬೇಶಕರ್ಕರಿ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿಷೇಕ, ಜೀವೋದ್ವಾಸನ, ಜೀವಕಲಶ, ಶಯ್ಯೋನ್ನಯನ ಹಾಗೂ ಮಹಾಪೂಜೆಗಳು ನಡೆಯಿತು. 10 ರಿಂದ ಬದಿಯಡ್ಕದ ಶ್ರೀಮಾತಾ ಹವ್ಯಕ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು. ಸಂಜೆ 6 ರಿಂದ ಧ್ಯಾನಾಧಿವಾಸ, ಅಧಿವಾಸ ಹೋಮ, ಕುಂಬೇಶಕರ್ಕರಿ ಪೂಜೆ, ಪರಿಕಲಶಪೂಜೆ, ಬ್ರಹ್ಮಕಲಶ ಪೂಜೆ ಮಹಾಪೂಜೆಗಳು ನೆರವೇರಿತು. ರಾತ್ರಿ 7.30 ರಿಂದ ಬೆಳ್ಳೂರು ಶ್ರೀಲಕ್ಷ್ಮೀಪಾರ್ವತಿ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು.
ಇಂದು(ಶುಕ್ರವಾರ) ಬೆಳಿಗ್ಗೆ 6 ರಿಂದ ಗಣಪತಿಹೋಮ ಬಳಿಕ ಬೆಳಿಗ್ಗೆ 10.21ರ ಸುಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ ಕಿನ್ನಿಂಗಾರು ವಿಷ್ಣುನಗರದ ಶ್ರೀವಿಷ್ಣುಮೂರ್ತಿ ಧೂಮಾವತಿ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ಅನ್ನಸಂತರ್ಪಣೆಗಳೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ.