ಬದಿಯಡ್ಕ: ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ. ಕಾಸರಗೋಡಿನ ಪ್ರತಿಯೊಬ್ಬ ಕನ್ನಡಿಗನ ನೋವು ಅದು ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರ ಅಸ್ಮಿತೆಯನ್ನು ಕಲಕುತ್ತದೆ. ಗಡಿ ನಾಡಿಗರಾಗಿ ಎಲ್ಲರಿಗೂ ಮಾದರಿಯಾಗುವ ಕನ್ನಡ ಚಟುವಟಿಕೆಗತಳು ನಡೆಯುತ್ತಿದ್ದು,ನೂರ ಮೂವತ್ತಕ್ಕೂ ಮಿಕ್ಕಿ ಶಾಲೆಗಳಿಗೆ ಪುಸ್ತಕಗಳನ್ನು ಸಂಗ್ರಹಿಸಿ ಉಚಿತವಾಗಿ ನೀಡುತ್ತಿರುವ ಜಾನಪದ ಪರಿಷತ್ತು ಮತ್ತು ಅಕಾಡೆಮಿಯ ಕಾರ್ಯ ಶ್ಲಾಘನೀಯ. ಕನ್ನಡದ ಪರವಾಗಿರುವ ಒಂದಷ್ಟು ಮನಸ್ಸುಗಳಿಗೆ ಸ್ಪೂರ್ತಿ ಪ್ರೋತ್ಸಾಹ ನೀಡಲು ಸದಾ ಸಿದ್ಧ. ಕಾಲಕಾಲಕ್ಕೆ ಕಾಸರಗೋಡಿನ ಕನ್ನಡಿಗರ ಸ್ಥಿತಿಗತಿಗಳನ್ನು ಅರಿತು ಕರ್ನಾಟಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಕರ್ನಾಟಕ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಬದಿಯಡ್ಕದ ಗುರುಸದನದಲ್ಲಿ ಶನಿವಾರ ನಡೆದ ಮಕ್ಕಳ ಜಾನಪದ ಮೇಳ ಹಾಗೂ ಕೇಳು ಮಾಸ್ಟರ್ ಸ್ಮರಣಾರ್ಥ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶುದ್ದ ಕನ್ನಡ ವಾಕ್ಚುತುರ್ಯದ ಇಲ್ಲಿಯ ಜನರ ಭಾಷಾ ಪ್ರೇಮ ಕರ್ನಾಟಕಕ್ಕೆ ಮಾದರಿಯಾದುದು. ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ದಿಗ್ಗಜ ಶೇಣಿ, ಕುಂಬಳೆ ಸುಂದರ ರಾವ್, ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಸಾಹಿತಿ ಹೋರಾಟಗಾರ ಕಯ್ಯಾರರು, ಸಾಹಿತ್ಯ ಸಂತ ಕೇಳು ಮಾಸ್ತರ್ ಅವರಂತಹ ಮಹಾನ್ ಸಾಧಕರ ನೆಲೆ ಬೀಡಾಗಿ ತನ್ನತನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈಗಲೂ ನಡೆಯುತ್ತಿರುವ ಬಹುಮುಖದ ಕಾರ್ಯಕ್ರಮಗಳು ಇನ್ನಷ್ಟು ವಿಸ್ತರಿಸಲ್ಪಡಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕೇಂದ್ರ ಇಂದು ಮತ್ತೆ ಕಾರ್ಯಕ್ಷಮತೆಯಲ್ಲಿ ಹಿಂದು ಬೀಳುವ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ನೆರವಿನ ಮೂಲಕ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ತಿಗೊಳಿಸಲು, ಪುನಶ್ಚೇತನ ನೀಡಲು ಶೀಗ್ರ ಕಾರ್ಯಪ್ರವೃತ್ತರಾಗುವುದಾಗಿ ಅವರು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತು ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಕನ್ನಡದ ಸೇವೆಯಲ್ಲಿ ತೊಡಗಿರುವ ಗಡಿನಾಡಿನ ಕನ್ನಡಿಗರಿಗೆ ಹಕ್ಕುಗಳ ಕಸಿಯಲ್ಪಡುವ ನಿಟ್ಟಿನ ಯಾವುದೇ ಭಯ ಬೇಡ. ಕರ್ನಾಟಕ ಸರಕಾರ ಗಡಿನಾಡಿನ ಕನ್ನಡಿಗರ ಬೆನ್ನ ಹಿಂದೆ ಯಾವತ್ತೂ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅವರು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ಹಸ್ತಾಂತರಿಸಿ ಮಾತನಾಡಿ, ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿರುವ ರಾಷ್ಟ್ರದ ಏಕೈಕ ಭಾಷೆಯಾಗಿರುವ ಕನ್ನಡದ ಕೀರ್ತಿ ಶಿಖರದಂತೆ ಗಡಿನಾಡು ಕಾಸರಗೋಡು, ಇಲ್ಲಿಯ ಕನ್ನಡ ಚಟುವಟಿಕೆಗಳು ಸಾಂಸ್ಕøತಿಕ, ಸಾಹಿತ್ತಿಕ ಬೆಳವಣಿಗೆಗಳಿಗೆ ಬಲ ನೀಡಿವೆ. ಜಗತ್ತನ್ನು ಕತ್ತಲೆಯಿಂದ ದೂರಗೊಳಿಸಿ ಬೆಳಕನ್ನು ನೀಡುವ ಸೂರ್ಯನಂತೆ ಅಜ್ಞಾನಿಯಾದ ಮಾನವನ ಹೃದಯದಲ್ಲಿ ಬೆಳಕನ್ನು ನೀಡುವುದು ಪುಸ್ತಕದ ಜ್ಞಾನ ಮಾತ್ರವಾಗಿದೆ. ವ್ಯಕ್ತಿ, ವ್ಯಕ್ತಿತ್ವ ಬೆಳೆಯುವಲ್ಲಿ ಪುಸ್ತಕಗಳ ಓದು ಮಹತ್ತರವಾದುದು. ಈ ನಿಟ್ಟಿನಲ್ಲಿ ಹೊಸ ತಲೆಮಾರು ಓದಿನೆಡೆಗೆ ಅಪ್ಪಿಕೊಳ್ಳುವಲ್ಲಿ, ಓದಿಗೆ ಪ್ರೋತ್ಸಾಹ ನೀಡುವಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ ಎಮದು ತಿಳಿಸಿ ಪ್ರಾಧಿಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
ಕ್ರೀಡಾ ಅಂಕಣಕಾರರಾದ ಜಗದೀಶ್ಚಂದ್ರ ಅಂಚನ್ ಸೂಟರ್‍ಪೇಟೆ ಅವರನ್ನು ಸನ್ಮಾನಿಸಲಾಯಿತು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತಿನ ಗಡಿನಾಡ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಪಟ್ಲ ಪೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಸಾಮಾಜಿಕ ಕಾರ್ಯಕರ್ತ ಸುಧಾಮ ಗೋಸಾಡ, ಬ್ಲಾಕ್ ಪಂಚಾಯತಿ ಸದಸ್ಯ ಅವಿನಾಶ್ ರೈ, ಕರ್ನಾಟಕ ಜಾನಪದ ಪರಿಷತ್ತು ಕುಶಲನಗರ ಘಟಕದ ಅಧ್ಯಕ್ಷ ಚಂದ್ರಮೋಹನ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಶ್ರೀಕಾಂತ್ ನೆಟ್ಟಣಿಗೆ, ಸಂಧ್ಯಾಗೀತಾ ಬಾಯಾರು, ರೇಶ್ಮಾ ನಾರಂಪಾಡಿ, ಜಯಲಕ್ಷ್ಮಿ ಮುಳ್ಳೇರಿಯ, ವಿದ್ಯಾ ಗಣೇಶ್ ಅಣಂಗೂರು ಮುಂತಾದವರು ಉಪಸ್ಥಿತರಿದ್ದರು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಝಡ್.ಎ.ಕಯ್ಯಾರ್ ವಂದಿಸಿದರು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಭಾಗದಲ್ಲಿ ರ್ಯಾಂಕ್ ವಿಜೇತೆ ರಮ್ಯಾ ಭಟ್ ಹಾಗೂ ಪುಲ್ಲಾಂಜಿ ಕಿರು ಚಿತ್ರದ ಬಾಲನಟ ವಿಜಯ ಪೆರಡಾಲ ರವರನ್ನು ಅಭಿನಂದಿಸಲಾಯಿತು.ಜಿಲ್ಲೆಯ 150ಕ್ಕಿಂತಲೂ ಮಿಕ್ಕಿದ ಕನ್ನಡ ಶಾಲೆಗಳು ಮತ್ತು 60ಕ್ಕಿಂತಲೂ ಮಿಕ್ಕಿದ ಗ್ರಂಥಾಲಯಗಳಿಗೆ ಉಚಿತ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು.