ಅಯೋಧ್ಯಾ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಪಕ್ಷದ ಸಂಸದರು ಭಾನುವಾರ ಅಯೋಧ್ಯಾಗೆ ಆಗಮಿಸುತ್ತಿದ್ದು, ಇಲ್ಲಿನ ರಾಮಲಲ್ಲಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಶಿವಸೇನಾ ನಾಯಕ ಸಂಜಯ್ ರಾವತ್, ರಾಮ ಮಂದಿರ ರಾಜಕೀಯದ ವಿಷಯವಲ್ಲ, ಬದಲಿಗೆ ನಂಬಿಕೆಯ ಸಂಕೇತ ಎಂದಿದ್ದಾರೆ.
ತಾವು ಎಂದಿಗೂ ರಾಮಮಂದಿರ ವಿವಾದವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡಿಲ್ಲ, ಮತಯಾಚಿಸಿಲ್ಲ ಎಂದ ಅವರು, ರಾಮಮಂದಿರ ನಿರ್ಮಿಸಬೇಕೆ ಬೇಡವೇ ಎಂಬುದು ಬಿಜೆಪಿಗೆ ಬಿಟ್ಟ ವಿಚಾರ. ಶಿವಸೇನೆ ಬಿಜೆಪಿ ಮಿತ್ರ ಪಕ್ಷವಷ್ಟೇ. ಈ ವಿಷಯದಲ್ಲಿ ತಾವು ಹೇಳುವುದೇನು ಇಲ್ಲ. ಆದರೆ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನರು ಬಯಸುವ ಕೆಲಸವನ್ನೇ ಮಾಡುತ್ತಾರೆ. ಆದ್ದರಿಂದ ರಾಮಮಂದಿರ ನಿರ್ಮಾಣವಾಗೇ ತೀರುತ್ತದೆ ಎಂದರು.
2020ರ ವೇಳೆಗೆ ಬಿಜೆಪಿ ರಾಜ್ಯ ಸಭೆಯಲ್ಲಿ ಬಹುಮತ ಗಳಿಸುತ್ತದೆ. ಅಷ್ಟರಲ್ಲಿ ರಾಮಮಂದಿರ ನಿರ್ಮಾಣಕ್ಕಿರುವ ಎಲ್ಲಾ ಅಡೆತಡೆಗಳನ್ನು ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮಮಂದಿರ ಭೇಟಿ ವೇಳೆ ಉದ್ಧವ್ ಠಾಕ್ರೆ ಮತ್ತಿತರರ ಸಂಸದರಿಗೆ ಸಕಲ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.