ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಪ್ರಾಥಮಿಕ ಶಾಲೆಯ ಮುದ್ರಿತ ಹಾಗೂ ಆನ್‍ಲೈನ್ ಶಾಲಾ ವಾರ ಪತ್ರಿಕೆ 'ಸ್ವರ್ಗವಿಷನ್' 3ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ ಗುರುವಾರ ನಡೆಯಿತು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಸಂಚಿಕೆಯನ್ನು ಮಕ್ಕಳಿಗೆ ಹಸ್ತಾಂತರಿಸುವುದರ ಮೂಲಕ ಬಿಡುಗಡೆಗೊಳಿಸಿದರು. 'ಸ್ವರ್ಗವಿಷನ್' ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 33 ಸಂಚಿಕೆಗಳನ್ನು ಪ್ರಕಟಿಸಿತ್ತು. ಹಲವು ಇಂಗ್ಲೀಷ್ ಹಾಗೂ ಕನ್ನಡ ಕಿರು ಚಿತ್ರವನ್ನು ಬಿಡುಗಡೆಗೊಳಿಸಿತ್ತು. ವಾರದ ವಾರ್ತಾವಾಚನ, ತರಗತಿ ಲೈಬ್ರೆರಿ, ಸಾಕ್ಷ್ಯ ಚಿತ್ರಗಳು, ಸ್ವರ್ಗ ವಿಷನ್ ಶಾಲಾ ಕ್ಯಾಲೆಂಡರ್ ಮೊದಲಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತನದೊಂದಿಗೆ ಸಂಚಲನ ಮೂಡಿಸಿದೆ.
ಶಾಲಾ ಚಟುವಟಿಕೆಗಳ ವರದಿ, ಮಕ್ಕಳ ಸೃಜನಾತ್ಮಕ ರಚನೆಗಳಾದ ಕತೆ, ಕವನ, ಪ್ರಬಂಧ, ಚಿತ್ರ ಇತ್ಯಾದಿ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಅನಾವರಣಗೊಳಿಸುವ ವೇದಿಕೆಯಾಗಿ ಸ್ವರ್ಗ ವಿಷನ್ ರೂಪುಗೊಂಡಿದೆ.
ಸ್ವರ್ಗ ವಿಷನ್ ಸಂಪಾದಕೀಯ ಮಂಡಳಿಯಲ್ಲಿ ಒಂದರಿಂದ ಏಳನೇ ತರಗತಿ ವರೆಗಿನ ತಲಾ ಓರ್ವ ಪ್ರತಿನಿಧಿಗಳಿದ್ದಾರೆ. ಪ್ರತಿ ಸಂಚಿಕೆಯಲ್ಲೂ ವಿವಿಧ ಸ್ಪರ್ಧೆಗಳನ್ನು ನಡೆಸಿ ಮಕ್ಕಳಿಗೆ ಬಹುಮಾನ ನೀಡಿ ಹೊಸ ಛಾಪನ್ನು ಮೂಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪತ್ರಿಕಾ ಕಾರ್ಯ ವೈಖರಿಯ ನೈಜ ಅನುಭವವ ನೀಡುತ್ತಿದೆ.
ಯುವ ಅಧ್ಯಾಪಕ ಮಂಜುನಾಥ್ ಭಟ್ 'ಸ್ವರ್ಗ ವಿಷನ್' ವ್ಯವಸ್ಥೆಯ ನೇತೃತ್ವವನ್ನು ವಹಿಸಿದ್ದಾರೆ. ಅಧ್ಯಾಪಕ ಸಿಬ್ಬಂದಿಗಳು, ರಕ್ಷಕ-ಶಿಕ್ಷಕ ಸಂಘ, ಮಹಿಳಾ ಮಂಡಳಿ, ಶಾಲಾ ವ್ಯವಸ್ಥಾಪಕರ ಪ್ರೋತ್ಸಾಹದೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯ, ಪಠ್ಯೇತರ ಕ್ಷೇತ್ರಗಳಲ್ಲಿ ಜ್ಞಾನಾರ್ಜನೆ ನೀಡುವುದರೊಂದಿಗೆ ಸಮಾಜದ ಆಗು ಹೋಗುಗಳ ಅರಿವು ಮೂಡಿಸಿ ಜನಮನ್ನಣೆ ಪಡೆದಿದೆ.