ನವದೆಹಲಿ: ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವ ಮೂಲಕ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ದೊಡ್ಡ ತಪ್ಪು ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರೆಸುವ ಕುರಿತ ಮಸೂದೆ ಮಂಡಿಸಿ ಮಾತನಾಡಿದ ಅಮಿತ್ ಶಾ, ಕಾಶ್ಮೀರದ ಇಂದಿನ ಬಿಕ್ಕಟ್ಟು ಮತ್ತು ಸಮಸ್ಯೆಗಳಿಗೆ ನೆಹರೂ ಅವರೇ ಕಾರಣ ಎಂದು ದೂರಿದರು.
ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಿದ್ದು ತಪ್ಪು ಮತ್ತು ಅದೊಂದು ಐತಿಹಾಸಿಕ ತಪ್ಪು ಎಂದರು.
ಅಮಿತ್ ಶಾ ಅವರು ನೆಹರೂ ಹೆಸರು ಪ್ರಸ್ತಾಪಿಸಿದ್ದಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವೇಳೆ ದೇಶ ವಿಭಜನೆ ಬಗ್ಗೆ ಮನೀಶ್ ತಿವಾರಿ ಅವರು ಈಗ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ನಾನು ಅವರಿಗೆ ಪ್ರಶ್ನಿಸಲು ಬಯಸುತ್ತೇನೆ. ವಿಭಜನೆಗೆ ಯಾರು ಕಾರಣ? ಇಂದು ಮೂರನೇ ಒಂದು ಭಾಗದಷ್ಟು ಜಮ್ಮು ಮತ್ತು ಕಾಶ್ಮೀರ ನಮ್ಮ ಹತೋಟಿಯಲ್ಲಿ ಇಲ್ಲ. ಅದಕ್ಕೆ ಕಾರಣ ಯಾರು ಎಂದು ಅಮಿತ್ ಶಾ ಪ್ರಶ್ನಿಸಿದರು.
ನೆಹರೂ ಅವರ ತಪ್ಪಿನಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಅಲ್ಲಿನ ಭಯೋತ್ಪಾದನೆ ದೇಶವ್ಯಾಪಿ ವಿಸ್ತರಿಸಿದೆ ಎಂದರು.
ಕಾಶ್ಮೀರದಲ್ಲಿ ಈಗ ಬದಲಾವಣೆಯ ಗಾಳಿ ಬೀಸ ತೊಡಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಬದಲಿಸಲು ಮುಂದಾಗಿದೆ ಎಂದರು.
ಜಮ್ಮು ಕಾಶ್ಮೀರದಲ್ಲಿ ನಡೆಯುವ ಬಹುತೇಕ ವಿಧ್ವಂಸಕ ಕೃತ್ಯಗಳಲ್ಲಿ ಪಾಕಿಸ್ತಾನದ ಕೈವಾಡವಿದೆ. ಭಯೋತ್ಪಾದನೆಯನ್ನು ಮೂಲದಿಂದಲೇ ಕಿತ್ತೊಗೆಯಬೇಕಾದ ಅಗತ್ಯವಿದೆ ಎಂದು ಅಮಿತ್ ಶಾ ಹೇಳಿದರು.