ಬದಿಯಡ್ಕ: ಪರಿಸರ ಸಂರಕ್ಷಣೆಯ ಕುರಿತು ಹೆಚ್ಚಿನ ಕಾಳಜಿಯನ್ನು ವಹಿಸಿ ನಾವು ಮುಂದುವರಿಯಬೇಕಿದೆ. ಪರಿಸರ ಸಮತೋಲನದಲ್ಲಿದ್ದರೆ ನಾವು ಆರೋಗ್ಯವಂತರಾಗಿರಲು ಸಾಧ್ಯ. ಪರಿಸರವನ್ನು ನಾವು ಎಂಬ ಭಾವನೆಯಿಂದ ಪ್ರೀತಿಸಿದರೆ ಮಾತ್ರ ವಿಶ್ವ ಪರಿಸರ ದಿನದ ಆಚರಣೆ ಮಹತ್ವ ಬರುತ್ತದೆ ಎಂದು ಆಲ್ ಕೇರಳ ಪೋಟೋ ಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಬದಿಯಡ್ಕ ಘಟಕದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಹೇಳಿದರು.
ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ ವತಿಯಿಂದ ನೀರ್ಚಾಲಿನಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಭೂಮಿಯ ಪ್ರಾಕೃತಿಕ ಸಮತೋಲನಕ್ಕೆ ಗಿಡಗಳು ಸಹಕಾರಿಯಾಗಿವೆ ಎಂದು ತಿಳಿಸಿದ ಅವರು ಸಕಾಲಕ್ಕೆ ಮಳೆ, ಬೆಳೆ ಬರಬೇಕಾದರೆ ಪ್ರಕೃತಿಯ ರಕ್ಷಣೆಯಾಗಬೇಕು ಎಂದರು.
ಸಭಾ ಕಾರ್ಯಕ್ರಮದ ಬಳಿಕ ನೀರ್ಚಾಲು ಪರಿಸರದಲ್ಲಿ ವಿವಿಧ ವರ್ಗದ ಗಿಡಗಳನ್ನು ನೆಡಲಾಯಿತು. ಘಟಕದ ಸದಸ್ಯರುಗಳಾದ ವೇಣುಗೋಪಾಲ್ ಆರೋಳಿ, ಉದಯಕುಮಾರ್ ಮೈಕುರಿ, ಮುರಲೀಧರ ತಲ್ಪಣಾಜೆ, ಬಾಲಕೃಷ್ಣ ನಿಡುಗಳ, ದೇವಾನಂದ ಆಚಾರ್ಯ ಸೀತಾಂಗೋಳಿ, ಸಂದೀಪ್ ಪೆರ್ಲ, ಕಿರಣ, ಗೋಪಾಲಕೃಷ್ಣ ಆರೋಳಿ ಜೊತೆಗಿದ್ದು ಸಹಕರಿಸಿದರು. ಘಟಕದ ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ಕೋಶಾಧಿಕಾರಿ ನಾರಾಯಣ ಓಡಂಗಲ್ಲು ವಂದಿಸಿದರು.