ಮುಳ್ಳೇರಿಯ: ರಾಷ್ಟ್ರ ಅನುಭವಿಸಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸರಿಂದ ಸಾಕಷ್ಟು ದಬ್ಬಾಳಿಕೆ ಅನುಭವಿಸಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಳಲಿದ್ದ ನಾಗರಿಕರಿಗೆ ಯೋಗ್ಯ ಪರಿಹಾರ ರೂಪವಾಗಿ ಪಿಂಚಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಇತ್ತೀಚೆಗೆ ಅಡೂರು ಗ್ರಾಮಾಧಿಕಾರಿಗಳ ಮೂಲಕ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಲಾಂಯಿತು.
ತುರ್ತು ಪರಿಸ್ಥಿತಿ ಹೋರಾಟ ಸಮಿತಿಯ ಜಿಲ್ಲಾ ಸಮಿತಿಯ ನಿರ್ದೇಶನದಂತೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಅಡೂರಿನ ನಾಗರಿಕರು ಪಿಂಚಣಿ ಯೋಜನೆಯನ್ನು ಆರಂಭಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು. ಮನವಿಯನ್ನು ಚರಕ್ಕಂಡ ಗಣೇಶ ರಾವ್ ಅವರು ಗ್ರಾಮಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಭಾಕರ ನಾಯಕ್ ಮಂಡೆಬೆಟ್ಟು, ಅಪ್ಪಕುಂಞ ಮಾಸ್ತರ್ ತಲ್ಪಚ್ಚೇರಿ, ಕುಂಞರಾಮ ತಲ್ಪಚ್ಚೇರಿ ಹಾಗೂ ಶ್ರೀಪ್ರಕಾಶ್ ಪಾಂಙಣ್ಣಾಯ ಉಪಸ್ಥಿತರಿದ್ದರು.