ನವದೆಹಲಿ: ದೇಶದ ಸುರಕ್ಷತೆ ಹಾಗೂ ಜನರ ಕಲ್ಯಾಣ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗೃಹ ಸಚಿವರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅಮಿತ್ ಶಾ, ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು. ಗೃಹ ಸಚಿವಾಲಯದ ಕಾರ್ಯಗಳು ಹಾಗೂ ಈಗ ನಿರ್ವಹಿಸುತ್ತಿರುವ ಪ್ರಮುಖ ವಿಷಯಗಳ ಬಗ್ಗೆ ಹಿರಿಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ರಾಷ್ಟ್ರಪತಿ ಆಡಳಿತಾವಧಿಯಲ್ಲಿ ಜಮ್ಮು- ಕಾಶ್ಮೀರದಲ್ಲಿ ಪರಿಸ್ಥಿತಿ ನಿರ್ವಹಣೆ ಹಾಗೂ ಅಸ್ಸಾಂನಲ್ಲಿ ಅಂತಿಮ ಎನ್ ಆರ್ ಸಿ ಪಟ್ಟಿ ಬಿಡುಗಡೆ ನಂತರ ಉದ್ಬವಿಸುವ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ನೂತನ ಸಚಿವರು ಹೆಚ್ಚಿನ ಪ್ರಾಮುಖ್ಯತೆ ನೀಡಿದರು
ಗೃಹ ಸಚಿವ ಸ್ಥಾನ ಕಲ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಆರ್ಪಿಸಿರುವ ಅಮಿತ್ ಶಾ, ದೇಶದ ಸುರಕ್ಷತೆ ಹಾಗೂ ಜನರ ಕಲ್ಯಾಣ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಾಗಿದ್ದು, ಮೋದಿ ಅವರ ನಾಯಕತ್ವದಡಿ ಈ ಆದ್ಯತೆಗಳನ್ನು ಪೂರೈಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ ಗೃಹ ಸಚಿವಾಲಯದ ಉತ್ತರ ಬ್ಲಾಕ್ ನಲ್ಲಿ ಅಮಿತ್ ಶಾ ಅವರಿಗೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ, ಗುಪ್ತಚರ ದಳದ ಮುಖ್ಯಸ್ಥ ರಾಜೀವ್ ಜೈನ್ ಮತ್ತಿತರ ಹಿರಿಯ ಅಧಿಕಾರಿಗಳು ಅದ್ದೂರಿ ಸ್ವಾಗತ ನೀಡಿದರು.