ನವದೆಹಲಿ: ವಿಶ್ವ ಯೋಗದಿನದ ಪ್ರಯುಕ್ತ ಅತ್ತ ರಾಂಚಿಯಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಗೆ ಚಾಲನೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಸೈನಿಕರು ಯೋಗಾಭ್ಯಾಸ ಪ್ರದರ್ಶಿಸಿದರು.
ದೆಹಲಿಯ ಕೆಂಪುಕೋಟೆಯಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಜು ಅವರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. ಅಂತೆಯೇ ಅತ್ತ ಹಿಮಾಚಲ ಪ್ರದೇಶದ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು 14 ಸಾವಿರ ಅಡಿ ಎತ್ತರದ ರೋಹ್ಟಂಗ್ ಪಾಸ್ ನಲ್ಲಿ ಮೈನಸ್ 10 ಡಿಗ್ರಿ ಚಳಿಯಲ್ಲಿ ಯೋಗ ಮಾಡಿ ಸಾಮಥ್ರ್ಯ ಪ್ರದರ್ಶನ ಮಾಡಿದರು. ಅಂತೆಯೇ ಇಂಡೋ-ಚೀನಾ ಗಡಿಯ ಕಿನ್ನೌರ್ ಜಿಲ್ಲೆಯಲ್ಲೂ ಐಟಿಬಿಪಿ ಸೈನಿಕರು ಯೋಗ ಪ್ರದರ್ಶನ ಮಾಡಿದರು.
ಹರ್ಯಾಣದಲ್ಲಿ ಬಿಎಸ್ ಎಫ್ ಯೋಧರು ಅಶ್ವಗಳ ಮೇಲೆ ನಿಂತು ಯೋಗ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಗುರುಗ್ರಾಮದಲ್ಲಿರುವ ಬಿಎಸ್ ಎಫ್ ಕ್ಯಾಂಪ್ ನಲ್ಲಿನ ನುರಿತ ಅಶ್ವಗಳ ಮೇಲೆ ಸೈನಿಕರು ಯೋಗ ಪ್ರದರ್ಶನ ನೀಡಿದರು. ಇತ್ತ ಜಮ್ಮುವಿನಲ್ಲಿ ಬಿಎಸ್ ಎಫ್ ಪಡೆಯ ಶ್ವಾನದಳ ತರಬೇತಿದಾರರೊಂದಿಗೆ ಯೋಗ ಮಾಡಿದವು. ಇತ್ತ ಕಾಶ್ಮೀರದ ಲಡಾಖ್ ನಲ್ಲಿ ಐಟಿಬಿಪಿ ಸಿಬ್ಬಂದಿಗಳು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಯೋಗ ಮಾಡಿದರು. ಸಿಕ್ಕಿಂನ 19 ಸಾವಿರ ಅಡಿ ಎತ್ತರದ ಒಪಿ ಡೋರ್ಜಿಲಾದಲ್ಲಿ ಸೈನಿಕರು ಮೈನಸ್ 15 ಡಿಗ್ರಿ ಚಳಿಯಲ್ಲಿ ಮಂಜಿನ ನಡುವೆ ಯೋಗಾಭ್ಯಾಸ ಮಾಡಿದರು.