ನವದೆಹಲಿ: 75 ವರ್ಷದ ವೃದ್ಧ ರೋಗಿಯ ನಿಧನ ಹಿನ್ನಲೆಯಲ್ಲಿ ಅವರ ಕುಟುಂಬದವರು ಕಿರಿಯ ವೈದ್ಯರ ಮೇಲೆ ಹಲ್ಲೆ ಮಾಡಿದ್ದನ್ನು ಪ್ರತಿಭಟಿಸಿ ಕೋಲ್ಕತ್ತಾದಲ್ಲಿ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ದೇಶಾದ್ಯಂತ ಹಲವು ಸರ್ಕಾರಿ ಆಸ್ಪತ್ರೆಗಳ ಸ್ಥಳೀಯ ವೈದ್ಯರು ಕೈಜೋಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸುಮಾರು 4,500 ವೈದ್ಯರುಗಳು ತಮ್ಮ ಒಂದು ದಿನದ ಟೋಕನ್ ಮುಷ್ಕರವನ್ನು ನಡೆಸಿದರು. ಮಹಾರಾಷ್ಟ್ರ ಸ್ಥಳೀಯ ವೈದ್ಯರುಗಳ ಒಕ್ಕೂಟಕ್ಕೆ(ಎಂಎಆರ್ ಡಿ) ಸೇರಿದ ವೈದ್ಯಕೀಯ ಸಂಸ್ಥೆಗಳ ವೈದ್ಯರು ರಾಜ್ಯದ ಎಲ್ಲಾ 26 ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟಿಗೆ ಕರ್ತವ್ಯಕ್ಕೆ ಗೈರಾಗಿದ್ದರಿಂದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಯಿತು.
ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವೈದ್ಯರು ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಮುಷ್ಕರ ನಿರತರಾಗಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಳಿದ ಸೇವೆಗಳು ಎಂದಿನಂತೆ ಮುಂದುವರಿದಿದೆ. ಕೆಇಎಂ ಆಸ್ಪತ್ರೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ವೈದ್ಯರು ಬ್ಯಾನರ್, ಪೋಸ್ಟರ್ ಗಳು ಮತ್ತು ಫಲಕಗಳನ್ನು ಹಿಡಿದು ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಮುಷ್ಕರ ನಿರತರಾಗಿದ್ದಾರೆ.
ಇದೇ ರೀತಿ ಪುಣೆ, ಔರಂಗಾಬಾದ್ ಮತ್ತು ನಾಗ್ಪುರಗಳಲ್ಲಿ ಸಹ ಪ್ರತಿಭಟನೆಗಳು ನಡೆಯಿತು. ದೆಹಲಿಯಲ್ಲಿ ಕೂಡ ವೈದ್ಯರು ತಮ್ಮ ಕೆಲಸಗಳನ್ನು ನಿಲ್ಲಿಸಿ ಮುಷ್ಕರ ನಿರತರಾಗಿದ್ದಾರೆ. ತುರ್ತು ಸೇವೆಯನ್ನು ಹೊರತುಪಡಿಸಿ ಹೊರರೋಗಿ ವಿಭಾಗ, ವಾರ್ಡ್ ಭೇಟಿ ಮತ್ತು ನಿತ್ಯದ ಆಪರೇಷನ್ ಥಿಯೇಟರ್ ಸೇವೆ ದಿನದ ಮಟ್ಟಿಗೆ ಮುಚ್ಚಿದೆ.ದೆಹಲಿಯ ಏಮ್ಸ್ ಮತ್ತು ಸಫ್ದರ್ ಜಂಗ್ ಆಸ್ಪತ್ರೆ ವೈದ್ಯರು ತಮ್ಮ ತಲೆಗೆ ಬ್ಯಾಂಡೇಜ್ ಗಳನ್ನು ಕಟ್ಟಿ ಎಲ್ಲಾ ವೈದ್ಯಕೀಯ ಸೇವೆಗಳನ್ನು ನಿಲ್ಲಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಡಯಗ್ನೊಸ್ಟಿಕ್ ಕೇಂದ್ರಗಳು ಕೂಡ ನಿಬರ್ಂಧ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೈಪುರದಲ್ಲಿ, ಕೇರಳದ ತಿರುವನಂತಪುರ, ಹೈದರಾಬಾದ್ ಗಳಲ್ಲಿ ಸಹ ಸ್ಥಳೀಯ ವೈದ್ಯರ ಪ್ರತಿಭಟನೆ ಮುಂದುವರಿದಿದೆ.
ಕಳೆದ ಸೋಮವಾರ ರಾತ್ರಿ 75 ವರ್ಷದ ವೃದ್ಧ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ವೈದ್ಯಕೀಯ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯದಿಂದ ರೋಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿ ಕಿರಿಯ ವೈದ್ಯ ಪರಿಬಾಹ ಮುಖರ್ಜಿ ಮೇಲೆ ನಡೆಸಿದ ಹಲ್ಲೆಯಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಇನ್ಸ್ ಟಿಟ್ಯೂಟ್ ಆಫ್ ನ್ಯೂರೋ ಸೈನ್ಸ್ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.