ಬದಿಯಡ್ಕ: ಸಾಧಕ ಹಿರಿಯ ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಅನುಕರಣೀಯ.ಅವರ ಅನುಭವ ಯುವ ತಲೆಮಾರಿಗೆ ಪ್ರೇರಣೆ ನೀಡಲಿ ಎಂದು ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್ ಸದಸ್ಯ ಇ.ಜನಾರ್ದನನ್ ಹೇಳಿದರು.
ಅವರು ವಿಶ್ವ ಪರಿಸರ ದಿನದಂದು ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ವತಿಯಿಂದ ಹಿರಿಯ ಕೃಷಿಕ ನಾಂದ್ರೋಡು ಮಹಾಲಿಂಗೇಶ್ವರ ಭಟ್ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು.
ಕೃಷಿ ನಮ್ಮ ಸಂಸ್ಕೃತಿ.ಕೃಷಿ ಇಲ್ಲದೆ ಜೀವನವಿಲ್ಲ"ಎಂಬುದನ್ನು ಸ್ವಾನುಭವದೊಂದಿಗೆ ಅವರು ನಿರೂಪಿಸಿದರು.ಗಿಡಗಳನ್ನು ಬೆಳೆಸಿ ಪರಿಸರ ಪ್ರೇಮಿಗಳಾಗುವ ಅಗತ್ಯದ ಬಗ್ಗೆ ಮಾತನಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯ ಡಾ.ವೇಣುಗೋಪಾಲ್ ಕಳೆಯತ್ತೋಡಿ ಅಭಿನಂದನ ಭಾಷಣ ಮಾಡಿ ಸನ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು. ಸ್ಥಳೀಯ ಗ್ರಾ.ಪಂ.ಸದಸ್ಯೆ ಎಲಿಜಬೆತ್ ಕ್ರಾಸ್ತ, ಹಿರಿಯ ಕೃಷಿಕ ಪತ್ತಡ್ಕ ಗಣಪತಿ ಭಟ್, ಎ.ವಿ.ಭಟ್ ಅಜ್ಜಿಮೂಲೆ ಶುಭಾಶಂಸನೆಗೈದರು. ಸನ್ಮಾನಿತರ ಪರವಾಗಿ ಗಿರೀಶ್ ನಾಂದ್ರೋಡು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ಗ್ರಂಥಾಲಯದ ವೈವಿಧ್ಯಮಯ ಚಟುವಟಿಕೆಗಳ ವಿವರ ನೀಡಿದರು.ಸನ್ಮಾನಿತರನ್ನು ಅಭಿವಂದಿಸಿದರು. ಕುಮಾರಿಯರಾದ ವೈಷ್ಣವಿ,ಅತ್ರೇಯಿ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕಾರಿ ಸಮಿತಿ ಸದಸ್ಯ ಗಣರಾಜ ಕೆ ಸನ್ಮಾನ ಪಾತ್ರ ವಾಚಿಸಿದರು. ಸದಸ್ಯ ಸುಧೀರ್ ಕೃಷ್ಣ ಪಿ.ಎಲ್ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಮಹಾಲಿಂಗೇಶ್ವರ ಭಟ್ ಅವರ ಅಕ್ಕಿ ಗಿರಣಿ ಮತ್ತು ಅವರು ಆವಿಷ್ಕಾರ ಮಾಡಿದ ಕೃಷಿ ಯಂತ್ರೋಪಕರಣಗಳನ್ನು ವೀಕ್ಷಿಸಲಾಯಿತು. ವಿವಿಧ ಸಂದೇಹಗಳಿಗೆ ಅವರು ಸಮರ್ಪಕ ಉತ್ತರಗಳನ್ನು ನೀಡಿದರು.