ಬದಿಯಡ್ಕ: ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಆಹಾರ ಪೂರೈಸುವ ಯೋಜನೆಯ ಅಂಗವಾಗಿ ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ "ಹಲಸು ಬೆಳೆಸಿ ಗೋವು ಉಳಿಸಿ" ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಲಿರುವ " ಹಲಸು ಮೇಳ " ಎಂಬ ವಿಶೇಷ ಸಮಾರಂಭದ ಕಾರ್ಯಕಾರಿ ಸಮಿತಿ ಸಭೆಯು ಬದಿಯಡ್ಕ ಬೋಳುಕಟ್ಟೆಯಲ್ಲಿರುವ ಡಾ ವೈ ವಿ ಕೃಷ್ಣಮೂರ್ತಿ ಬದಿಯಡ್ಕ ಇವರ ನಿವಾಸದಲ್ಲಿ ಭಾನುವಾರ ನಡೆಯಿತು.
ಈಶ್ವರಿ ಬೇರ್ಕಡವು ಅಧ್ಯಕ್ಷತೆ ವಹಿಸಿದ್ದರು. ಶಿವಪ್ರಸಾದ ವರ್ಮುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಮಾಹಿತಿಗಳನ್ನಿತ್ತರು. ಹಲಸಿನಿಂದ ಆಧುನಿಕವಾಗಿಯೂ ಜನಜನಿತವಾದ ಉತ್ಪನ್ನಗಳನ್ನು ತಯಾರಿಸಿ ಮೇಳವನ್ನು ಯಶಸ್ವಿಗೊಳಿಸುವ ಕುರಿತು ಡಾ.ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ ಇವರು ವಿವರಣೆಗಳನ್ನಿತ್ತರು.
ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಾತೃವಿಭಾಗ ಪ್ರಧಾನೆ ಕುಸುಮಾ ಪೆರ್ಮುಖ, ಮುಷ್ಟಿಭಿಕ್ಷಾ ವಿಭಾಗ ಪ್ರಧಾನೆ ಗೀತಾಲಕ್ಷ್ಮಿ, ಕೇಶವಪ್ರಸಾದ ಎಡಕ್ಕಾನ, ಕೇಶವಪ್ರಸಾದ ಕೂಟೇಲು, ಜಯಪ್ರಕಾಶ ಪಜಿಲ, ವಿವಿಧ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಕರಪತ್ರ ವಿತರಣೆ, ಉತ್ಪನ್ನಗಳ ತಾಯಾರಿ, ಕಾರ್ಯಕರ್ತರ ವ್ಯವಸ್ಥೆ, ಸ್ಟಾಲ್ ಜೋಡಣೆ ಮೊದಲಾದ ಮೇಳದ ವಿವಿಧ ವಿಭಾಗಗಳ ಬಗ್ಗೆ ಸಮಾಲೋಚಿಸಲಾಯಿತು. ಹರಿಪ್ರಸಾದ ಪೆರ್ಮುಖ ವಂದಿಸಿದರು.