ಕುಂಬಳೆ: ಇಚ್ಲಂಪಾಡಿ ಕರ್ಡೇಲುಮೂಲೆಯ ಪಾಳುಬಿದ್ದಿರುವ ಸಾವಿರಾರು ವರ್ಷಗಳ ಹಿಂದಿನ ಅಪೂರ್ವವಾದ ನಾಗಬನ ಮತ್ತು ರಕ್ತೇಶ್ವರಿ, ಗುಳಿಗ ಬನ ಸಾನ್ನಿಧ್ಯಗಳ ಪ್ರತಿಷ್ಠಾ ಕಲಶೋತ್ಸವ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ದಿವ್ಯ ಹಸ್ತದಲ್ಲಿ ಇಂದು ನೆರವೇರಲಿದೆ.
ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಪ್ರಾಸಾದ ಶುದ್ದಿ ಮೊದಲಾದ ವಿಧಿವಿಧಾನಗಳು ನೆರವೇರಿದವು.
ಇಂದು ಬೆಳಿಗ್ಗೆ 10ಕ್ಕೆ ನಾಗ, ಗುಳಿಗ, ರಕ್ತೇಶ್ವರಿ ದೈವದ ಪ್ರತಿಷ್ಠೆ ನಡೆಯಲಿದೆ. 11 ರಿಂದ ಎಡನಾಡಿನ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದವರಿಂದ ಪಾರ್ಥಸಾರಥ್ಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ದಿವಾಣ ಶಿವಶಂಕರ ಭಟ್ ಅವರ ನಿರ್ದೇಶನದಲ್ಲಿ ಏರ್ಪಡಿಸಲಾಗಿದೆ.
ಸಚಿನ್ ಶೆಟ್ಟಿ ಕುದ್ರಪ್ಪಾಡಿ, ರೋಹಿಣಿ ಎಸ್ ದಿವಾಣ, ಶ್ರೀಸ್ಕಂದ ದಿವಾಣ ಹಿಮ್ಮೇಳದಲ್ಲೂ, ದಿವಾಣ ಶಿವಶಂಕರ ಭಟ್, ವಿನಯ ಎಸ್.ಚಿಗುರುಪಾದೆ, ಉದಯಶಂಕರ ಭಟ್ ಮಜಲು, ಶಿವರಾಮ ಭಂಡಾರಿ ಇಚ್ಲಂಪಾಡಿ ಇವರುಗಳು ಮುಮ್ಮೇಳದಲ್ಲಿ ಪಾಲ್ಗೊಳ್ಳುವರು.