ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತು ಪರಿಧಿಯ ಮೀಯಪದವು ನಿವಾಸಿ ಕೊರಗ ಮಹಿಳೆ ಮೀನಾಕ್ಷಿ ಬಡ್ಡೋಡಿ(28) ಕಣ್ಣೂರು ವಿ.ವಿಯಿಂದ ಎಂ.ಫಿಲ್ ಪದವಿ ಗಿಟ್ಟಿಸಿಕೊಂಡಿದ್ದಾರೆ. ಹಿಂದುಳಿದ ಕೊರಗ ಸಮುದಾಯದ ಓರ್ವ ಮಹಿಳೆ ಉನ್ನತ ವ್ಯಾಸಂಗ ಪ್ರಾಪ್ತಿಯಾಗಿಸಿ ಕನ್ನಡ ಎಂ.ಫಿಲ್ ಪದವಿ ಸಾಧನೆ ಮಾಡುವ ಮುಖಾಂತರ ಸಮುದಾಯವನ್ನು ಮೊತ್ತಮೊದಲ ಬಾರಿಗೆ ಹೆಮ್ಮೆ ಪಡುವಂತೆ ಮಾಡಿದ ದಾಖಲೆಯನ್ನು ಇವರು ನಿರ್ಮಿಸಿದ್ದಾರೆ. ಸತತ ಪರಿಶ್ರಮ, ಶ್ರದ್ಧೆಯ ಮೂಲಕ ಕನ್ನಡ ಭಾಷೆಯಲ್ಲಿ ಎಂ.ಫಿಲ್ ಪಡೆದ ಈಕೆಗೆ ಕಣ್ಣೂರು ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕಿ ಡಾ.ಯು.ಮಹೇಶ್ವರಿ ಮಾರ್ಗದರ್ಶನ ಮಾಡಿದ್ದಾರೆ.
'ಕೊರಗ ಬದುಕು, ಭಾಷೆ-ಸಾಂಸ್ಕøತಿಕ ಅನುಸಂಧಾನ'ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ ಮೀನಾಕ್ಷಿ ಈ ಹಿಂದೆ ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.61 ಪ್ರತಿಶತ ಅಂಕ ಗಳಿಸಿದ್ದರು. ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಎಂ.ಫಿಲ್ ಪದವಿ ಗಿಟ್ಟಿಸಿಕೊಂಡ ಮೀನಾಕ್ಷಿ ಬಡ್ಡೋಡಿ ಸಾಧನೆ ಬಗ್ಗೆ ತನಗೆ ಹೆಮ್ಮೆ ಎನಿಸುತ್ತಿದೆ ಎಂದು ಮಾರ್ಗದರ್ಶಕಿ ಡಾ.ಯು.ಮಹೇಶ್ವರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿರುವ ಕೊರಗ ಸಮುದಾಯ ಮಂದಿ ಮಾತನಾಡುವ ತುಳು ಉಪಭಾಷೆಯ ಅಪರೂಪದ ಶಬ್ದಗಳ ಸಂಗ್ರಹ ಮತ್ತು ಕೊರಗರ ಸಾಂಸ್ಕøತಿಕ ಬದುಕಿನ ಚಿತ್ರಣ ಸಂಶೋಧನಾ ಪ್ರಬಂಧದಲ್ಲಿದೆ. ಮೀನಾಕ್ಷಿಯವರ ಎಂ.ಫಿಲ್ ಕಲಿಕೆಗೆ ಪೂರಕವಾಗಿ ಶಿಕ್ಷಣ ಇಲಾಖೆ ಲ್ಯಾಪ್‍ಟಾಪ್ ನೀಡಿತ್ತು. ಪ್ರಸ್ತುತ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಲಕ್ಷ್ಯವನ್ನು ಮೀನಾಕ್ಷಿ ಬಡ್ಡೋಡಿ ಇರಿಸಿದ್ದಾರೆ. 2017 ಫೆ. ತಿಂಗಳಲ್ಲಿ ಎಂ.ಫಿಲ್‍ಗೆ ನೋಂದಾಯಿತರಾಗಿದ್ದರು. ಎಂ.ಎ ಕನ್ನಡ ತೇರ್ಗಡೆ ಹೊಂದಿದ ವರ್ಷದಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ ಸತ್ಕಾರ ಕೂಟದಲ್ಲಿ ಭಾಗವಹಿಸುವ ಅವ ಕಾಶವನ್ನು ಮೀನಾಕ್ಷಿಯವರು ಪಡೆದಿದ್ದರು.
ಕೊರಗ ಸಮುದಾಯವು ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲಿದ್ದು ಕುಲಕಸುಬಾದ ಬುಟ್ಟಿ ಹೆಣೆಯುವಿಕೆಯನ್ನು ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಇದೇ ಸಮುದಾಯದ ವ್ಯಕ್ತಿಯೊಬ್ಬರು ಪಿ.ಎಚ್.ಡಿ ಪದವಿಯನ್ನು ಪಡೆದ ದಾಖಲೆಯಿದ್ದು, ಆದರೆ ಕಾಸರಗೋಡಿನಿಂದ ಪ್ರಥಮವಾಗಿ ಹಿಂದುಳಿದ ಸಮುದಾಯದ ಓರ್ವ ಮಹಿಳೆ ಈ ಸಾಧನೆ ಮಾಡುತ್ತಿರುವುದು ಬಹಳ ವಿಶೇಷ ಎನ್ನುತ್ತಾರೆ ಮಾರ್ಗದರ್ಶಕಿ ಮಹೇಶ್ವರೀ ಅವರು.
(ಚಿತ್ರ ಮಾಹಿತಿ: ಕಣ್ಣೂರು ವಿ.ವಿಯಿಂದ ಎಂ.ಫಿಲ್ ಪದವಿ ಪಡೆದ ಮೀನಾಕ್ಷಿ ಬಡ್ಡೋಡಿ
ಹಾಗೂ ಮಾರ್ಗದರ್ಶಕಿ ಡಾ.ಯು.ಮಹೇಶ್ವರಿ ಅವರೊಂದಿಗೆ ಮೀನಾಕ್ಷಿ.)
.