ನವದೆಹಲಿ: ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತ ತನ್ನ ನಿಲುವನ್ನು ಪುನರ್ ಉಚ್ಚರಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಜನಸಂಖ್ಯಾ ನಿಯಂತ್ರಣ ಕಾನೂನನ್ನು ಒಂದು ಆಂದೋಲನವನ್ನಾಗಿ ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ಜನಸಂಖ್ಯಾ ಹೆಚ್ಚಳ ದೇಶದ ಅಭಿವೃದ್ಧಿ ಹಾಗೂ ಸೌಹಾರ್ದಯುತ ಸಮಾಜಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಪ್ರತಿಯೊಂದು ಮನೆಯಲ್ಲೂ ಜನಸಂಖ್ಯಾ ನಿಯಂತ್ರಣ ಕಾನೂನು ಪ್ರಚಾರವನ್ನು ಕೈಗೊಳ್ಳಬೇಕು. ಕಾಲ ಮತ್ತು ಸಂಪನ್ಮೂಲಗಳು ಮಿತಿಯಲ್ಲಿದ್ದು, ರಸ್ತೆಯಿಂದ ಪಾರ್ಲಿಮೆಂಟ್ ವರೆಗೂ ಆಂದೋಲನವನ್ನಾಗಿ ರೂಪಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮೂರು ಮಕ್ಕಳನ್ನು ಪಡೆದವರಿಗೆ ಮತದಾನದ ಹಕ್ಕನ್ನು ನೀಡದಂತೆ ಸರ್ಕಾರ ಕಾನೂನು ಜಾರಿಗೆ ತರಬೇಕೆಂಬ ಯೋಗ ಗುರು ಬಾಬಾ ರಾಮ್ ದೇವ್ ಅವರ ಹೇಳಿಕೆಯನ್ನು ಗಿರಿರಾಜ್ ಸಿಂಗ್ ಈ ಹಿಂದೆ ಬೆಂಬಲಿಸಿದ್ದರು.
ಮುಂದಿನ 50 ವರ್ಷಗಳಲ್ಲಿ ದೇಶದ ಜನಸಂಖ್ಯೆ 150 ಕೋಟಿಗಿಂತ ಹೆಚ್ಚಾಗಲು ನಾವು ಬಿಡಬಾರದು, ಮೂರು ಮಕ್ಕಳನ್ನು ಪಡೆದವರಿಗೆ ಮತದಾನದ ಹಕ್ಕನ್ನು ಸರ್ಕಾರ ರದ್ದುಪಡಿಸುವುದರಿಂದ ಇದು ಸಾಧ್ಯವಾಗಲಿದೆ. ಇಲ್ಲವಾದರೆ ಚುನಾವಣೆಗೆ ಸ್ಪರ್ಧಿಸಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪಡೆದು ಖುಷಿಪಡುತ್ತಾರೆ ಎಂದು ರಾಮ್ ದೇವ್ ಹೇಳಿಕೆ ನೀಡಿದ್ದರು.
ವಿಶ್ವಸಂಸ್ಥೆ ಪ್ರಕಾರ 2017ಲ್ಲಿ ಭಾರತದಲ್ಲಿ ಜನಸಂಖ್ಯೆ ಅಂದಾಜು 1.3 ಬಿಲಿಯನ್ ಇತ್ತು. 2024ರೊಳಗೆ ಇದು ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಎನ್ನಲಾಗಿದೆ.