ಮಂಜೇಶ್ವರ : ಮಂಜೇಶ್ವರ ಎಸ್. ಎ.ಟಿ ಪ್ರೌಢಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನ ಆಚರಣೆ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ಮಂಜೇಶ್ವರ ಆರಕ್ಷಕ ಠಾಣೆಯ ಜನಮೈತ್ರಿ ಇಲಾಖೆಯ ಸಿಬ್ಬಂದಿ ತಂಬಿ ಇ.ಎಸ್.ವಿಶೇಷ ಉಪನ್ಯಾಸ ನೀಡಿದರು. ಅವರು ಮಾತನಾಡಿ, ವಿದ್ಯಾರ್ಥಿಗಳು ಈ ಸಮಾಜವನ್ನು ಮುನ್ನಡೆಸಬೇಕಾದವರು. ಸಮಾಜದಲ್ಲಿ ದಾರಿ ತಪ್ಪಿಸುವ ಕೆಲವು ದುಷ್ಕøತ್ಯಗಳಿಗೆ ಬಲಿಬೀಳದೆ ಭವ್ಯ ಬದಕನ್ನು ಕಟ್ಟಿ ಮುನ್ನಡೆಯಬೇಕು. ಪರಿಸರದಲ್ಲಿ ಕಂಡುಬರುವ ಸಮಾಜಘಾತುಕ ಶಕ್ತಿಗಳನ್ನು ಬಗ್ಗುಬಡಿಯುವಲ್ಲಿ ಈ ಬಗ್ಗೆ ಮಾಹಿತಿಗಳನ್ನು ಠಾಣೆಗೆ ನೀಡಿ ಅವರನ್ನು ಸಮಾಜದಿಂದ ಬೇರ್ಪಡಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು. ನಮ್ಮ ಆರೋಗ್ಯ ಮತ್ತು ಮನಸ್ಸನ್ನು ಸಮತೋಲನದಲ್ಲಿರಿಸಿದರೆ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯ, ಇದಕ್ಕಾಗಿ ಮಾದಕ ವಸ್ತುಗಳಿಂದ ದೂರ ಇರಬೇಕು. ಹಾಗೂ ಉತ್ತಮ ಆರೋಗ್ಯ ದಿಂದ ನಮ್ಮ ಸಮಾಜವನ್ನು ಸದೃಢ ಗೊಳಿಸಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಿಬ್ಬಂದಿ ಕಾರ್ಯದರ್ಶಿ ಈಶ್ವರ ಕಿದೂರು, ಎಸ್ ಆರ್ ಜಿ ಸಂಚಾಲಕ ನಾರಾಯಣ ಹೆಗ್ಡೆ, ಅಧ್ಯಾಪಕರಾದ ಜಯಪ್ರಕಾಶ್ ಶೆಟ್ಟಿ ಬೇಳ, ಗಣೇಶ್ ನಾಯಕ್, ಮಹೇಶ್ ಕೆ.ವಿ. ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಕ ಶ್ಯಾಮ್ ಪ್ರಕಾಶ್ ಸ್ವಾಗತಿಸಿ, ಅಧ್ಯಾಪಕ ನಾಗೇಶ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಯನ್ನು ಶಿಕ್ಷಕ ನಾಗೇಶ್ ಬೋಧಿಸಿದರು.