ಕುಂಬಳೆ: ಕುಂಬಳೆ ಗ್ರಾ. ಪಂ.ನ ವ್ಯಾಪ್ತಿಯ ರಾ. ಹೆ. ಪಕ್ಕದ ಮೊಗ್ರಾಲ್ ರೈಲ್ವೆ ಅಂಡರ್ ಪಾಸ್ ಯೋಜನೆಗೆ ಬಡಿದ ಬಾಲಗ್ರಹಪೀಡೆ ಇನ್ನೂ ನಿವಾರಣೆಯಾಗಿಲ್ಲ. ಈ ಪ್ರದೇಶದ ಬೆಸ್ತರಿಗೆ ರಸ್ತೆ ಸಂಪರ್ಕವಿಲ್ಲದೆ ಪೇಟೆಯನ್ನು ಸಂಪರ್ಕಿಸಲು ರೈಲು ಹಳಿಯನ್ನು ದಾಟಬೇಕಾಗಿದೆ. ಸುಮಾರು 30 ವರ್ಷಗಳಲ್ಲಿ ಈ ಪ್ರದೇಶದಲ್ಲಿ ರೈಲು ಹಳಿ ದಾಟುತ್ತಿದ್ದಾಗ ವಿದ್ಯಾರ್ಥಿ, ಮಹಿಳೆಯರ ಸಹಿತ 10 ಮಂದಿ ರೈಲು ಹಳಿಯಲ್ಲಿ ಈಗಾಗಲೇ ಕಳೆದ ಕೆಲವು ಚರ್ಷಗಳಿಂದ ಸಾವಿಗೀಡಾಗಿದ್ದಾರೆ.
ಈ ಸಮಸ್ಯೆಗೆ ಪರಿಹಾರ ಕಾಣಲು ಇಲ್ಲೊಂದು ರೈಲ್ವೇ ಅಂಡರ್ ಪಾಸ್ ನಿರ್ಮಿಸಲು ಕರಾವಳಿತೀರ ಪ್ರದೇಶ ನಿವಾಸಿಗಳ ಸಭೆಯು ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕಳೆದ 2013ರ ನ. 23ರಂದು ಕುಂಬಳೆ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆದಿತ್ತು. ಮೊಗ್ರಾಲ್ ರೈಲ್ವೇ ಅಂಡರ್ ಪಾಸ್ ಯೋಜನೆಯನ್ನು ಕೈಗೊಳ್ಳುವಂತೆ ಕಾಸರಗೋಡು ಲೋಕಸಭಾ ಸದಸ್ಯರ ಮತ್ತು ಮಂಜೇಶ್ವರ ಶಾಸಕರ ಮೂಲಕ ಅಂದಿನ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಸ್ಥಳೀಯ ನಿವಾಸಿಗಳ ಬೇಡಿಕೆಯನ್ನು ಮನ್ನಿಸಿ ರೈಲ್ವೇ ಇಲಾಖೆ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದರಂತೆ ಪ್ರಾರಂಭಿಕ ಹಂತವಾಗಿ ಕುಂಬಳೆ ಗ್ರಾ. ಪಂ.ವತಿಯಿಂದ 3.50 ಲಕ್ಷ ರೂ. ರೈಲ್ವೆ ಇಲಾಖೆಗೆ ಪಾವತಿಸಿದೆ.
ಆದರೆ ಯೋಜನೆ ಕೈಗೆತ್ತಿಕೊಳ್ಳ ಬೇಕಾದಲ್ಲಿ ರಾಜ್ಯ ಸರಕಾರದ ಪಾಲು ಪಾವಪತಿಸಬೇಕೆಂಬ ನಿಬಂಧನೆಯಂತೆ ಕಾಸರಗೋಡು ಅಭಿವೃದ್ಧಿ ಪ್ರಾಧಿಕಾರ ಯೋಜನೆಯ ಪ್ರಭಾಕರನ್ ಆಯೋಗದಲ್ಲಿ ಯೋಜನೆಯನ್ನು ಒಳಪಡಿಸಿ ರಾಜ್ಯ ಸರಕಾರ 2018ರ ಜೂ. 14ರಂದು 2.16 ಕೋಟಿ ರೂ. ನಿಧಿಯನ್ನು ರೈಲ್ವೇ ಇಲಾಖೆಗೆ ಪಾವತಿಸಿದೆ. ಅದರೆ ಕಾಮಗಾರಿಯ ಟೆಂಡರ್ ಇನ್ನೂ ಕರೆದಿಲ್ಲ.
ಮನವಿಗೆ ಸ್ಪಂದನೆಯಿಲ್ಲ:
ಸ್ಥಳೀಯ ಮೊಗ್ರಾಲ್ ದೇಶೀಯವೇದಿ ಸಂಘಟನೆಯ ಪದಾಧಿಕಾರಿಗಳು ಕಾಸರಗೋಡು ಜಿ. ಪಂ.ಅಧ್ಯಕ್ಷರ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿಬಾರಿ ಚುನಾವಣೆ ಸಮೀಪಿಸಿದಾಗ ರಾಜಕೀಯ ನಾಯಕರು ಸಮಸ್ಯೆಯ ಪರಿಹಾರದ ಭರವಸೆ ನೀಡಿ ತೆರಳಿದವರು ಮತ್ತೆ ಇಲ್ಲಿಗೆ ತಿರುಗಿ ನೋಡುತ್ತಿಲ್ಲವೆಂಬ ಆರೋಪ ಸ್ಥಳೀಯರದು. ಕೆಲವು ಸಮಯದ ಹಿಂದೆ ಸ್ಥಳೀಯರು ರೈಲ್ವೇ ಹಳಿಯ ಅಡಿಭಾಗದಲ್ಲಿ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಿಸಿದರು. ಆದರೆ ಕಾನೂನು ಉಲ್ಲಂಘನೆ ನೆಪದಲ್ಲಿ ಕೆಲಕಾಲದ ಬಳಿಕ ಈ ಸಂಪರ್ಕ ರಸ್ತೆಗೆ ರೈಲ್ವೇ ಇಲಾಖೆ ರಸ್ತೆಯ ಅರ್ಧಭಾಗದಲ್ಲಿ ಸಂಚಾರಕ್ಕೆ ತಡೆಯೊಡ್ಡಿದೆ. ಇದರಿಂದ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳ ಸಂಚಾರಕ್ಕೆ ತೊಡಕಾಗಿ ಬೆಸ್ತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೊಗ್ರಾಲ್ ಅಂಡರ್ ಪಾಸ್ ಯೋಜನೆ ಇನ್ನೂ ಸಾಕಾರಗೊಳ್ಳದಿದ್ದಲ್ಲಿ ಇಲ್ಲಿ ಇನ್ನಷ್ಟು ಸಾವು ನೋವು ಸಂಭವಿಸಲಿರುವುದು.ಆದುದರಿಂದ ಸಂಭಾವ್ಯ ದುರಂತಕ್ಕೆ ಮೊದಲು ಯೋಜನೆಯನ್ನು ಸ್ಪಷ್ಟ ಬಹಮತದೊಂದಿಗೆ ಅಧಿಕಾರಕ್ಕೇರಿದ ನೂತನ ಕೇಂದ್ರ ಸರಕಾರ, ನೂತನ ಆಯ್ಕೆಯಾದ ಕಾಸರಗೋಡು ಲೋಕಸಭಾ ಸಂಸದರು ರೈಲ್ವೇ ಇಲಾಖೆಗೆ ಒತ್ತಡ ತಂದು ಯೋಜನೆಯನ್ನು ಆದಷ್ಟು ಶೀಘ್ರ ಕೈಗೊಜಳ್ಳಬೇಕಾಗಿದೆ.
ಅಭಿನಂದನೆ:
ಕುಂಬಳೆ ಮತ್ತು ಮೊಗ್ರಾಲ್ ಪುತ್ತೂರಿ ನಲ್ಲಿ ಅಂಡರ್‍ಪಾಸ್ ಯೋಜನೆ ಪೂರ್ಣಗೊಂಡು ಸಂಪರ್ಕ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತೆ ಮಾಡಿದ ಕೇಂದ್ರ ಸರಕಾರಕ್ಕೆ ಮತ್ತು ರೈಲ್ವೇ ಇಲಾಖೆಗೆ ಫಲಾನುಭವಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇದು ಇನ್ನೂ ವಿಳಂಬವಾಗುತ್ತಿರುವುದಕ್ಕೆ ಸ್ಥಳೀಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಅಭಿಮತ:
ಯೋಜನೆಗೆ ಇನ್ನೂ 75 ಲಕ್ಷ ರೂ. ಪಾವತಿಸಬೇಕೆಂದು ಪಾಲಕ್ಕಾಡ್ ರೈಲ್ವೆ ವಲಯಾಧಿಕಾರಿಯವರಿಂದ ಪತ್ರ ಬಂದಿದೆ. ಇದನ್ನು ಪಾವತಿಸಿದಲ್ಲಿ ಕಾಮಗಾರಿ ಟೆಂಡರ್ ಕರೆಯಲಾಗುವುದಾಗಿ ಅಧಿಕಾರಿ ಭರವಸೆ ನೀಡಿದ್ದಾರೆ. ನಿಧಿಯನ್ನು ಕೂಡಲೇ ಪಾವತಿಸಲಾಗುವುದು.
-ಎ.ಜಿ.ಸಿ ಬಶೀರ್,
ಅಧ್ಯಕ್ಷರು ಕಾಸರಗೋಡು ಜಿಲ್ಲಾ ಪಂಚಾಯತಿ.