HEALTH TIPS

ಹಿರಿಯ ರಂಗಕರ್ಮಿ ಡಿ ಕೆ ಚೌಟ ನಿಧನ


     ಬೆಂಗಳೂರು: ಹಿರಿಯ ರಂಗಕರ್ಮಿ, ರಂಗ ನಿರಂತರ ಕಾರ್ಯಾಧ್ಯಕ್ಷ ಡಿ ಕೆ ಚೌಟ ಬುಧವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು. 
      ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
       ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದ ಡಿ.ಕೆ. ಚೌಟ ತುಳು ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿಯೂ ಡಿ.ಕೆ. ಚೌಟ ಕಾರ್ಯ ನಿರ್ವಹಿಸಿದ್ದರು.
       ಜೂನ್ 1, 1938ರಲ್ಲಿ ಮಂಜೇಶ್ವರ ಸಮೀಪದ ಮೀಯಪದವಿನ ದರ್ಬೆಯಲ್ಲಿ ಬಂಟ ಮನೆತನದಲ್ಲಿ ಜನಿಸಿದ್ದರು.
    ಸಾಹಿತಿ, ನಾಟಕಗಾರ, ಕಲಾಪ್ರೇಮಿ, ಸಂಘಟಕ, ಸಮಾಜಸೇವಕ, ಉದ್ಯಮಿ ಹಾಗೂ ಪ್ರಗತಿಪರ ಕೃಷಿಕರಾಗಿ ಬಹುಮುಖಿ ಆಯಾಮದ ಸಾಧಕರಾಗಿದ್ದ ಡಿ.ಕೆ.ಚೌಟ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕೃತರು.
     ಬೆಂಗಳೂರು ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಅನೇಕ ವರ್ಷ ಕಾರ್ಯನಿರ್ಹಿಸಿದ್ದ ಡಿ.ಕೆ.ಚೌಟ ಅವರು, ಬೆಂಗಳೂರಿನಲ್ಲಿ ಚಿತ್ರಸಂತೆ ಚಿತ್ರಕಲಾ ಉತ್ಸವವನ್ನು ಜನಪ್ರಿಯಗೊಳಿಸಲು ಕಾರಣಕರ್ತರಾಗಿದ್ದರು.
     ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಾಪದವು ಸಮೀಪದ ದರ್ಬೆ ಡಿ.ಕೆ.ಚೌಟ ಅವರ ಹುಟ್ಟೂರು. ಮಂಜೇಶ್ವರ ಗೋವಿಂದ ಪೈ ಸಂಸ್ಮರಣಾ ಕೇಂದ್ರವಾದ ಗಿಳಿವಿಂಡು ಟ್ರಸ್ಟ್ ನಲ್ಲಿಯೂ ಡಿ.ಕೆ.ಚೌಟರು ಪದಾಧಿಕಾರಿಯಾಗಿದ್ದರು.
      ಡಿ.ಕೆ ಚೌಟರ ತುಳು ಕಾದಂಬರಿ ಮಿತ್ತಬೈಲ್ ಯಮುನಕ್ಕ ಬಾರೀ ಜನಪ್ರಿಯತೆ ಪಡೆದು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿತ್ತು.  ಅವರ ಪಿಲಿಪತ್ತಿ ಗಡಸ್ ತುಳು ನಾಟಕ ಯಶಸ್ವಿ ನಾಟಕವಾಗಿ ಅನೇಕ ಪ್ರದರ್ಶನಗಳನ್ನು ಕಂಡಿತ್ತು. ಕರಿಯಜ್ಜೆರೆನ ಕತೆಕುಲು, ಧರ್ಮತ್ತೇಯ ಅವರ ಮಹತ್ವದ ಕೃತಿಗಳು. ಆನಂದಕೃಷ್ಣ ಎಂಬ ಕಾವ್ಯನಾಮದಿಂದ ಅವರು ಸಾಹಿತ್ಯ ಕೃಷಿ ಮಾಡುತ್ತಿದ್ದರು.
   ಹುಟ್ಟೂರಾದ ದರ್ಬೆಯಲ್ಲಿ ಕೂಡುಕುಟುಂಬ ಹೊಂದಿರುವ ಚೌಟರು ಅಲ್ಲಿ ಬೃಹತ್ ಕೃಷಿ ಭೂಮಿ ಹೊಂದಿದ್ದು, ಪ್ರಗತಿಪರ ಕೃಷಿಕರಾಗಿ ರಾಂಬುಟಾನ್ ಸಹಿತ ವಿವಿಧ ಹಣ್ಣುಗಳ ವ್ಯವಸಾಯ, ಅಡಿಕೆ, ತೆಂಗು ಬಾಳೆಗಳ ಸಹಿತ ವಿವಿಧ ಕೃಷಿ ನಉತ್ಪನ್ನಗಳನ್ನು ಬೆಳೆಸಿ ಗಮನ ಸೆಳೆದಿದ್ದರು.
    1995 ರಲ್ಲಿ ಬೆಂಗಳೂರು ಬಂಟರ ಸಂಘವು ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವು ಡಿ.ಕೆ ಚೌಟರ ಅಧ್ಯಕ್ಷ ತೆಯಲ್ಲಿ ನಡೆದಿತ್ತು.. ಮಂಗಳೂರಿನಲ್ಲಿಯೂ 2017 ರಲ್ಲಿ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ಆಯೋಜಿಸಿದ್ದ ಬಂಟ ಸಮ್ಮಿಲನ ಸಮಾವೇಶದ ಅಧ್ಯಕ್ಷತೆಯನ್ನು ಡಿ.ಕೆ.ಚೌಟ ಅವರು ವಹಿಸಿದ್ದರು.
      ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದ ಡಿ.ಕೆ.ಚೌಟರು ಅನೇಕ ವರ್ಷ ವಿದೇಶದಲ್ಲಿ ದ್ದವರು. ಘಾನಾ , ನೈಜೀರಿಯ, ಲಂಡನ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ ಡಿ.ಕೆ.ಚೌಟ ಅವರು ಬೆಂಗಳೂರಿನಲ್ಲಿ ತನ್ನ ಹೊಸ ರಫ್ತು ಉದ್ಯಮದ ಮೂಲಕ ಅನೇಕರಿಗೆ ಉದ್ಯೋಗ ಕಲ್ಪಿಸಿದವರು. ಬೆಂಗಳೂರಿನಲ್ಲಿ ಉದ್ಯಮದ ಜೊತೆಗೆ ಸಾಮಾಜಿಕ ಸೇವೆ, ಸಂಘಟನೆ, ಕಲೆ, ನಾಟಕ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಕ್ರೀಯರಾಗಿದ್ದರು. ಕೇರಳ ತುಳು ಅಕಾಡೆಮಿಯ ಪ್ರಸ್ತುತದ ತುಳು ಭವನ ಕಟ್ಟಡ ನಿರ್ಮಾಣ ಸಹಿತ ಅದರ ಶ್ರೇಯೋಭಿವೃದ್ದಿಗೆ ಮುಖ್ಯ ಸಲಹೆಗಾರರಾಗಿ ಸಹಕರಿಸಿದ್ದರು.
       ಪತ್ನಿ ರಮಾ ಚೌಟ, ಪುತ್ರ ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ, ಪುತ್ರಿ ಅಂತರಾಷ್ಟ್ರೀಯ ಆನೆಗಳ ಅಧ್ಯಯನ ಸಂಶೋಧಕಿ ಪ್ರಜ್ಞಾ ಚೌಟ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
    ಡಿ.ಕೆ. ಚೌಟ ಅವರ ನಿಧನಕ್ಕೆ ಸಚಿವ ಕೃಷ್ಣ ಬೈರೇಗೌಡ ಸಂತಾಪ ಸೂಚಿಸಿದ್ದು, ಡಿ.ಕೆ. ಚೌಟ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು. ಅವರು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ರಂಗ ನಿರಂತರದ ಪೋಷಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಆ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದರು. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ಡಿ.ಕೆ. ಚೌಟ ಅವರ ಪಾತ್ರ ಬಹಳ ದೊಡ್ಡದು. ಚಿತ್ರಸಂತೆ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಪರಿಷತ್ತು ಖ್ಯಾತಿ ಪಡೆಯಲು ಕಾರಣರಾದರು ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries