ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ವಿಶೇಷ ಪೂಜಾರ್ಚನೆಯೊಂದಿಗೆ `ಸಹಜ ವೈಷ್ಣವ' ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ನೆರವೇರಿತು.
ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರಾಗಿದ್ದ ದಿ.ದೇವಕಾನ ಕೃಷ್ಣ ಭಟ್ ಅವರ ನಿಧನಕ್ಕೆ ಕಲಾಸಂಘದ ವತಿಯಿಂದ ಈ ಸಂದರ್ಭ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗೌರವಾನ್ವಿತ ಮಾರ್ಗದರ್ಶಕರೂ ಪ್ರಸಾದನ ಕಲಾ ಪ್ರಸಾರಕರೂ ಆಗಿ ತನ್ನ ಪ್ರಾಮಾಣಿಕ ಕಲಾ ಸೇವೆಯಿಂದ ಜನಪ್ರಿಯರಾದ ದೇವಕಾನ ಕೃಷ್ಣ ಭಟ್ ಅವರು ತೆಂಕುತಿಟ್ಟು ಕಲಾಕ್ಷೇತ್ರಕ್ಕೆ ಅರ್ಪಿಸಿದ ಕಲಾ ಸೇವೆ ಅಪೂರ್ವವೆಂದು ಯಕ್ಷಗಾನ ಅರ್ಥಧಾರಿ ಸಂಘದ ಹಿರಿಯ ಕಲಾವಿದ ಕಲ್ಲಡ್ಕ ರಾಮಯ್ಯ ರೈ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಂಬಳೆಯ ದೇವರಾಜ ಆಚಾರ್ಯ ಅವರು ಭಾಗವಹಿಸಿದ್ದರು. ಭಾಗವತ ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಸಹಜ ವೈಷ್ಣವ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ ಮತ್ತು ದಯಾನಂದ ಪಾಟಾಳಿ ಮಯ್ಯಾಳ ಪಾಲ್ಗೊಂಡರು. ಚೆಂಡೆ ಮದ್ದಳೆ ವಾದನದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ, ಸದಾನಂದ ಮಯ್ಯಾಳ ಕಾಣಿಸಿಕೊಂಡರು. ಕಲ್ಲಡ್ಕ ಗುತ್ತು ರಾಮಯ್ಯ ರೈ (ಶ್ರೀರಾಮ), ಹರ್ಷಿತಾ ನಡುಬೈಲು(ಅಂಗದ), ಲಾವಣ್ಯ ನಡುಬೈಲು(ಹನುಮಂತ), ಭಾಸ್ಮಿತ ನಡುಬೈಲು(ಜಾಂಬವ), ಬಿ.ಹೆಚ್ ವೆಂಕಪ್ಪ ಗೌಡ (ಸುಗ್ರೀವ), ಎ.ಜಿ.ಮುದಿಯಾರು(ರಾವಣ), ನಾರಾಯಣ ಪಾಟಾಳಿ ಮಯ್ಯಾಳ(ರಾವಣದೂತ), ರಮಾನಂದ ರೈ ದೇಲಂಪಾಡಿ(ಅತಿಕಾಯ), ತೆಕ್ಕುಂಜ ಶಂಕರಮೂರ್ತಿ(ವಿಭೀಷಣ), ವೀರಪ್ಪ ಸುವರ್ಣ ನಡುಬೈಲು(ಲಕ್ಷ್ಮಣ) ಅವರು ಅರ್ಥಧಾರಿಗಳಾಗಿ ಗಮನ ಸೆಳೆದರು. ಬಿ.ಹೆಚ್ ಮಮತಾ ಬೆಳ್ಳಿಪ್ಪಾಡಿ ಸ್ವಾಗತಿಸಿ, ಲತಾ ಆಚಾರ್ಯ ಬನಾರಿ ವಂದಿಸಿದರು.