ಕಾಸರಗೋಡು: ಮಾನಸಿಕ ಒತ್ತಡ ಮತ್ತು ಖಿನ್ನತೆಗಳ, ಜೀವನ ಶೈಲಿ ಅನಾರೋಗ್ಯಗಳ ಬಿಗಿಮುಷ್ಠಿಯಿಂದ ನಮ್ಮನ್ನು ಪಾರುಮಾಡುವ ನಿಟ್ಟಿನಲ್ಲಿ ಯೋಗ ಈ ಕಾಲಘಟ್ಟದ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಯೋಗ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಿನಾನೂರು-ಕರಿಂದಳಂ ನಲ್ಲಿ ಸ್ಥಾಪಿಸಲಾಗುವ ಕೇಂದ್ರ ಯೋಗ-ಪ್ರಕೃತಿ ಚಿಕಿತ್ಸೆ ಇನ್ಸ್ ಸ್ಟಿಟ್ಯೂಟ್ ಲೋಕಾರ್ಪಣೆ ಮೂಲಕ ಜಿಲ್ಲೆ ಯೋಗದ ಕೇಂದ್ರಸ್ಥಾನವಾಗಿ ಮಾರ್ಪಡಲಿದೆ ಎಂದವರು ತಿಳಿಸಿದರು.
ಜಿಲ್ಲಾ ಹೋಮಿಯೋ ವೈದ್ಯಾಧಿಕಾರಿ ಡಾ.ಕೆ.ರಾಮಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದ್ದರು. ಕಲೆಕ್ಟರೇಟ್ ಸ್ಟಾಫ್ ಕೌನ್ಸಿಲ್ ಅಧ್ಯಕ್ಷನಾರಾಯಣನ್, ಪದ್ಮೇಷನ್, ಭಾರತೀಯ ಚಿಕಿತ್ಸಾ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಡಾ.ಪಿ.ಆರ್. ಸಲೋಜ ಕುಮಾರಿ, ಕೊಯೊಂಕರ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ಟಿ.ಕೆ.ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
" ಹೃದಯದ ಆರೋಗ್ಯಕ್ಕೆ ಯೋಗ" ಎಂಬ ಸಂದೇಶದೊಂದಿಗೆ ಈ ವರ್ಷದ ಯೋಗದಿನ ಆಚರಣೆಗೊಂಡಿದೆ. ಉದುಮಾ ಆಯುಷ್ ಗ್ರಾಮದ ಯೋಗ ಪ್ರಾತ್ಯಕ್ಷಿಕೆದಾರೆ ಕೆ.ಪಿ.ಶೈಲಜಾ ಅವರ ನೇತೃತ್ವದಲ್ಲಿ ಪರಿಣತರು ಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಸಿಬ್ಬಂದಿ, ಸ್ಥಳೀಯ ರೆಸಿಡೆನ್ಸ್ ಅಸೋಸಿಯೇಶನ್ ಗಳ ಸದಸ್ಯರು, ಭಾರತೀಯ ಚಿಕಿತ್ಸಾ ಇಲಾಖೆ,ಹೋಮಿಯೋ ಇಲಾಖೆ ಸಿಬ್ಬಂದಿ ಮೊದಲಾದವರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದರು.
(ಚಿತ್ರ ಮಾಹಿತಿ: ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಯೋಗ ಪ್ರದರ್ಶನ.)