ನವದೆಹಲಿ: ಬಂಗಾಳಕೊಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಸೇನೆಯ ಎಎನ್ 32 ಜೆಟ್ ವಿಮಾನ ನಾಪತ್ತೆಯಾಗಿ 24 ಗಂಟೆಗಳು ಕಳೆದರೂ ಪತ್ತೆಯಾಗದ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆಗೆ ಇದೀಗ ಇಸ್ರೋ ಮುಂದಾಗಿದೆ.
ಇಸ್ರೋದ ಉಪಗ್ರಹಗಳ ನೆರವಿನಿಂದಾಗಿ ಇದೀಗ ಶೋಧ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದ್ದು. ಈ ಸಂಬಂಧ ಐಎಎಫ್ ಅಧಿಕಾರಿಗಳು ಇಸ್ರೋ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
8ಮಂದಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 13 ಮಂದಿಯನ್ನು ಹೊತ್ತಿದ್ದ ವಿಮಾನ ಜೂನ್ 2ರಂದು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು. ಅಸ್ಸಾಂನ ಜೊರ್ಹಾತ್ ನಿಂದ ಹೊರಟಿದ್ದ ವಿಮಾನ ಅರುಣಾಚಲ ಪ್ರದೇಶದ ಮೆಂಚುಕಾಗೆ ತೆರಳ ಬೇಕಿತ್ತು. ಆದರೆ ವಿಮಾನ ಟೇಕ್ ಆಫ್ ಆದ ಕೇವಲ ಒಂದೇ ಗಂಟೆಯಲ್ಲಿ ವಿಮಾನ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿತು. ವಿಮಾನದ ಸಂಪರ್ಕ ಸಾಧಿಸಲು ಸಾಕಷ್ಟು ಪ್ರಯತ್ನಿಸಲಾಯಿತಾದರೂ ವಿಮಾನ ಪತ್ತೆಯಾಗಿರಲಿಲ್ಲ. ಹೀಗಾಗಿ ಇದೀಗ ವಾಯುಸೇನೆ ಇಸ್ರೋ ನರೆವು ಪಡೆಯಲು ಮುಂದಾಗಿದೆ.
ವಾಯುಸೇನೆಯಿಂದಲೂ ಮುಂದುವರಿದ ಶೋಧ:
ನಾಪತ್ತೆಯಾಗಿರುವ ವಿಮಾನದ ಪತ್ತೆಗಾಗಿ ಈಗಾಗಲೇ ಭಾರತೀಯ ವಾಯುಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ವಾಯುಸೇನೆಯ ಸುಖೋಯ್ 30ಎಂಕೆಐ ಯುದ್ಧ ವಿಮಾನ, ಸಿ 130 ಜೆ ಸೂಪರ್ ಹಕ್ರ್ಯುಲಸ್ ಮತ್ತು ಇತರೆ ಶೋಧಕ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಬಂಗಾಳಕೊಲ್ಲಿಯಲ್ಲಿ ಮೊಡ ಕವಿದ ವಾತಾವರಣವಿದ್ದರೂ, ವಿಮಾನಗಳು ನಿರಂತರವಾಗಿ ಶೋಧ ನಡೆಸುತ್ತಿವೆ ಎಂದು ತಿಳಿದುಬಂದಿದೆ.