ಮಂಜೇಶ್ವರ: ಆಗಾಗ ಅಪಘಾತಗಳಿಗೆ ಕಾರಣವಾಗುತ್ತಿರುವ ಮಂಜೇಶ್ವರ-ಉಪ್ಪಳ ರೈಲು ನಿಲ್ದಾಣಗಳ ಮಧ್ಯೆ ರೈಲ್ವೇ ಕ್ರಾಸಿಂಗ್ ಗಳಿರುವಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬ ದಶಕಗಳ ಬೆಡಿಕೆಗೆ ಕೊನೆಗೂ ಬಲಬಂದಿದ್ದು, ಈ ನಿಟ್ಟಿನ ಯತ್ನಗಳು ಇದೀಗ ಚುರುಕುಗೊಂಡಿದೆ.
ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರವು ರೈಲ್ವೇ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರೈಲ್ವೇ ಅಭಿವೃದ್ದಿ ನಿಗಮಕ್ಕೆ ಅನುಮತಿ ನೀಡಿದೆ.
ಪ್ರಸ್ತುತ ಕರಡಿ ಯೋಜನೆಯಡಿ ಮಂಜೇಶ್ವರ-ಉಪ್ಪಳ ಹೊರತು ರಾಜ್ಯದ ಇತರೆಡೆಗಳಲ್ಲಾಗಿ ಒಟ್ಟು 27 ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದೆ. ಜಿಲ್ಲೆಯ ತೃಕ್ಕರಿಪುರ, ಪಯ್ಯನ್ನೂರು ಆಸುಪಾಸಿನ ಒಳವರ, ರಾಮವಿಲ್ಲದಲ್ಲೂ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಅಲ್ಲದೆ ಅಪಘಾತಗಳು ನಡೆಯುತ್ತಿರುವ ಇತರ ಪ್ರದೇಶಗಳನ್ನೂ ಗುರುತಿಸಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿದುಬಂದಿದೆ.
ಈ ಮೇಲ್ಸೇತುವ ನಿರ್ಮಾಣ ಹಾಗೂ ಅಗತ್ಯದ ಭೂ ಸ್ವಾದೀನದ ಹೊಣೆ ಕೇರಳ ರೈಲ್ವೇ ಅಭಿವೃದ್ದಿ ನಿಗಮ ವಹಿಸಿಕೊಳ್ಲಲಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ.50ನ್ನು ರಾಜ್ಯ ಸರಕಾರ ಹಾಗೂ ಮಿಕ್ಕುಳಿದ ನಿಧಿಯನ್ನು ಕೇಂದ್ರ ಸರಕಾರ ಮತ್ತು ರೈಲ್ವೇ ಇಲಾಖೆ ವಹಿಸಲಿದೆ.