ಮಂಜೇಶ್ವರ: ಡಾ.ಡಿ.ಕೆ ಚೌಟರ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರೇಮ ಅಗಾಧವಾದುದು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಸಂಸ್ಥೆಯ ಬೆಳವಣಿಗೆಗೆ ಚೌಟರ ಕೊಡುಗೆ ಗಣನೀಯವಾದುದು. ಮೀಯಪದವಿನಂತಹ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಚೌಟರು ವಿಶ್ವನಾಯಕರಾಗಿ ಬೆಳೆದು ನಿಂತವರು ಎಂದು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಘಟಕ, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ, ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಂಟರ ಸಂಘ ಮೀಂಜ ಘಟಕದ ಸಂಯುಕ್ತ ಆಶ್ರಯದಲ್ಲಿ ಮೀಯಪದವು ಶ್ರೀವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಡಾ.ಡಿ.ಕೆ ಚೌಟ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ನುಡಿನಮನ ಸಲ್ಲಿಸಿ ಮಾತನಾಡಿದರು.
ಶ್ರದ್ಧಾಂಜಲಿ ನುಡಿಗಳನ್ನಾಡಿದ ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರು ಚೌಟರ ಬಹುಮುಖ ವ್ಯಕ್ತಿತ್ವ, ಮತ್ತು ಔದಾರ್ಯವನ್ನು ತೆರೆದಿಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಚೌಟರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ ಎಂ.ಸಾಲ್ಯಾನ್, ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರೇಮಾ.ಕೆಭಟ್, ಸತೀಶ್ ಅಡಪ ಸಂಕಬೈಲು, ಶ್ರೀಧರ ರಾವ್. ಆರ್.ಎಂ, ಚಂದ್ರಶೇಖರ ಶೆಟ್ಟಿ, ಎಸ್.ನಾರಾಯಣ ಭಟ್, ರಾಜಾರಾಮ ರಾವ್, ರಾಮಕೃಷ್ಣ ಕಡಂಬಾರು, ಪುಷ್ಪರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ನುಡಿನಮನಗೈದರು.