ನವದೆಹಲಿ: ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಬ್ರೇಕ್ ಹಾಕುವಂತೆ ಹಣಕಾಸು ಕ್ರಿಯಾ ಕಾರ್ಯಪಡೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೇ ವಿಚಾರವಾಗಿ ಭಾರತ ಕೂಡ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದು, ಪಾಕಿಸ್ತಾನ ಕಾಲಮಿತಿಯೊಳಗೆ ಎಫ್‍ಎಟಿಎಫ್ ಭಯೋತ್ಪಾದನೆ-ನಿಗ್ರಹ ಕ್ರಿಯಾ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
ಅತ್ತ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ ಎ ಟಿ ಇ) ಅಕ್ಟೋಬರ್ ಒಳಕೆ ವಿಶ್ವಸಂಸ್ಥೆ ಜಾಗತಿಕ ಉಗ್ರರು ಎಂದು ಘೋಷಣೆ ಮಾಡಿರುವ ಪೈಕಿ ಪಾಕಿಸ್ತಾನದಲ್ಲಿ ನೆಲೆಯೂರಿರುವ ಉಗ್ರರಾದ ಹಫೀಜ್ ಸಯ್ಯೀದ್ ಮತ್ತು ಮಸೂದ್ ಅಜರ್ ಅಜರ್ ಆರ್ಥಿಕ ನೆರವನ್ನು ಕಡಿತಗೊಳಿಸುವಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಒಂದು ವೇಳೆ ಈ ವಿಚಾರದಲ್ಲಿ ಮತ್ತೆ ಪಾಕಿಸ್ತಾನ ವಿಫಲವಾದರೆ ಆ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಎಫ್ ಎ ಟಿ ಇ ಈ ಎಚ್ಚರಿಕೆ ನೀಡಿದೆ.
ಇದರ ಬೆನ್ನಲ್ಲೇ ಇದೇ ವಿಚಾರವಾಗಿ ಭಾರತ ಕೂಡ ಪಾಕಿಸ್ತಾನಕ್ಕೆ ನೇರ ಸಂದೇಶ ಭಯೋತ್ಪಾದನೆ ಕುರಿತು ಪಾಕಿಸ್ತಾನ ಪರಿಶೀಲಿಸಬಹುದಾದ, ಬದಲಾಯಿಸಲಾಗದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಪಾಕಿಸ್ತಾನದ ಉಗ್ರ ಪ್ರಾಯೋಜಕತ್ವದ ಕುರಿತು ಜಗತ್ತಿಗೇ ತಿಳಿದಿದ್ದು, ಇದೀಗ ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲೇಬೇಕಿದೆ. ಕಣ್ಣೊರೆಸುವ ತಂತ್ರಗಾರಿಕೆ ಇನ್ನು ಮುಂದೆ ನಡೆಯಲಾರದು ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಜೊತೆಗೆ ಹಣಕಾಸು ಕ್ರಿಯಾ ಕಾರ್ಯಪಡೆ ಭಯೋತ್ಪಾದನೆಗೆ ಆರ್ಥಿಕ ನೆರವು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾಕ್ ಸರ್ಕಾರ ಎಫ್ ಎ ಟಿ ಇ ಆದೇಶವನ್ನು ಅಂತಿಮ ಗಡುವಿನ ಒಳಗೆ ಕಾರ್ಯಗತಗೊಳಿಸುವ ಎಲ್ಲ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಂತೆಯೇ ಪಾಕಿಸ್ತಾನದ ಕ್ರಮ ಪರಿಶೀಲಿಸಬಹುದಾದ, ಬದಲಾಯಿಸಲಾಗದ ಕ್ರಮವಾಗಿರಬೇಕು ಎಂದು ಭಾರತ ಹೇಳಿದೆ.
ಪ್ಯಾರಿಸ್ ಮೂಲದ ಪೈನಾನ್ಸಿಯಲ್ ಆಕ್ಷನ್ ಟಾಸ್ಕ್ ಪೋರ್ಸ್ ಜಾಗತಿಕ ಸಂಸ್ಥೆ ಭಯೋತ್ಪಾದನೆಯ ಆರ್ಥಿಕ ನೆರವು ನಿಗ್ರಹ ಸಂಸ್ಥೆಯಾಗಿದ್ದು, ಭಯೋತ್ಪಾದನೆಗೆ ಬಳಕೆಯಾಗುವ ಹವಾಲ ದಂಧೆಯನ್ನು ನಿಗ್ರಹಿಸಲೆಂದೇ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ.