ಬದಿಯಡ್ಕ : ಕಾಸರಗೋಡು ಜಿಲ್ಲಾ ಮೋಗೇರ ಸಂಘದ ಆಶ್ರಯದಲ್ಲಿ 2018-19ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಉತೀರ್ಣರಾದ ಸಮುದಾಯದ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರ ಹಾಗೂ ಮೊಗೇರ ಸಂಘದ ಸ್ಥಾಪಕ ದಿ. ಬಿ.ಎಂ ಈಶ್ವರ ಮಾಸ್ತರ್‍ರ ಸಂಸ್ಮರಣಾ ಕಾರ್ಯಕ್ರಮ ಇತ್ತೀಚೆಗೆ ಬದಿಯಡ್ಕ ನಿರಂತರ ಕಲಿಕಾ ಕೇಂದ್ರದ ಸಭಾಂಗಣದಲ್ಲಿ ಜರಗಿತು.
ಜಿಲ್ಲಾಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿ ಪ್ರತಿಭಾ ಪುರಸ್ಕಾರ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಮುಖ್ಯೋಪಾಧ್ಯಾಯ ರಾಮ ಮಾಸ್ತರ್ ದಡ್ಡಂಗಡಿಯವರು ದಿ. ಬಿ.ಎಂ ಈಶ್ವರ ಮಾಸ್ತರ್ ಭಾವ ಚಿತ್ರಕ್ಕೆ ಹಾರಾರ್ಪಣೆಗೈದು ಸಂಸ್ಮರಣೆ ನಡೆಸಿದರು. ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಅಂಗಾರ ಅಜಕ್ಕೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ಸಲಹಾ ಸಮಿತಿ ಸದಸ್ಯ ಪದ್ಮನಾಭ ಚೇನೆಕ್ಕೋಡು, ಕೃಷ್ಣದಾಸ್ ದರ್ಬೆತ್ತಡ್ಕ, ಬದಿಯಡ್ಕ ಗ್ರಾಮಪಂಚಾಯತಿ ಸದಸ್ಯೆ ಶಾಂತಾ ಬಾರಡ್ಕ, ರವಿ ಕನಕಪ್ಪಾಡಿ, ಗೋಪಾಲ ದರ್ಬೆತ್ತಡ್ಕ, ರಾಮ ಪಟ್ಟಾಜೆ ಶುಭಹಾರೈಸಿದರು. ಕಿರಣ್ ಕುಮಾರ್ ಪಿ, ಪ್ರತಿಭಾ ಪುರಸ್ಕಾರ ಪಡೆದುಕೊಂಡರು. 2014ನೇ ವರ್ಷದಲ್ಲಿ ಪ್ರತಿಭಾ ಪುರಸ್ಕಾರವನ್ನೂ ಪಡೆದು ಈಗ ಉದ್ಯೋಗಕ್ಕೆ ತೆರಳುವ ಸಿದ್ಧತೆಯಲ್ಲಿರುವ ಪವಿತ್ರ ಕುಮಾರ್ ತನ್ನ ಅನಿಸಿಕೆಯನ್ನು ಇತರ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರಾಜ್ಯ ಕಾರ್ಯದರ್ಶಿ ಹರಿರಾಮ ಕುಳೂರು ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು. ರವಿಕಾಂತ ಕೇಸರಿ ಕಡಾರು ಕಾರ್ಯಕ್ರಮ ನಿರೂಪಿಸಿದರು.