ಕಾಸರಗೋಡು: ಔಷಧ ಸಂಪತ್ತನ್ನು ಸಂರಕ್ಷಿಸಬೇಕು ಎಂಬ ಸಂದೇಶದೊಂದಿಗೆ ರಾಜ್ಯ ಔಷಧ ಸಸ್ಯ ಮಂಡಳಿ ನೇತೃತ್ವದಲ್ಲಿ ಜಾರಿಗೊಳಿಸುವ ಗೃಹ ಚೈತನ್ಯ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ಮತಾಡಿದ ಅವರು ಔಷಧ ಸಸ್ಯಗಳನ್ನು ಮನೆಯಂಗಳದಲ್ಲೇ ನೆಟ್ಟು ಬೆಳೆಸಲುನಾವೆಲ್ಲರೂ ಬದ್ಧರಾಗಬೇಕು. ಸರಕಾರ ಘೋಷಿಸುವ ಅನೇಕ ಯೋಜನೆಗಳು ಕೃಷಿಕರ ಗಮನಕ್ಕೆ ಬಾರದೇ ಹೋಗುವ ಸ್ಥಿತಿ ಇಂದಿದೆ. ಈ ಬಗ್ಗೆ ಗ್ರಾಮಪಂಚಾಯತ್ ಅಧ್ಯಕ್ಷರು ವಿಶೇಷ ಗಮನ ಹರಿಸಬೇಕು ಎಂದವರು ಆಗ್ರಹಿಸಿದರು. ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆಯ ಸಹಕಾರದೊಂದಿಗೆ ಜಿಲ್ಲೆಯ ಎಲ್ಲಮನೆಗಳಲ್ಲೂ ಔಷಧ ಸಸ್ಯ ಬೆಳೆಸುವ ಯೋಜನೆ ಆರಂಭಿಸಲಾಗುವುದು ಎಂದವರು ತಿಳಿಸಿದರು.
ರಾಜ್ಯ ಔಷಧ ಮಂಡಳಿ ಸದಸ್ಯ ಕೆ.ವಿ.ಗೋವಿಂದನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಜೈವಿಕ ವೈವಿಧ್ಯ ಮಂಡಳಿ ಸದಸ್ಯ ಮತ್ತು ಮೆಂಬರ್ ಸೆಕ್ರಟರಿ ಡಾ.ವಿ.ಬಾಲಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ನೌಕರಿ ಖಾತರಿ ಯೋಜನೆ ಜಿಲ್ಲಾ ಯೋಜನೆ ನಿರ್ದೇಶಕ ಕೆ.ಪ್ರದೀಪ್ ಸ್ವಾಗತಿಸಿದರು. ಕಾಸರಗೊಡು, ಮಂಜೇಶ್ವರ, ಕಾರಡ್ಕ ಬ್ಲೋಕ್ ಗಳ ಗ್ರಾಮಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಕೃಷಿಭವನ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.