ಬದಿಯಡ್ಕ: ಪುಸ್ತಕಗಳ ಓದು ತಿಳುವಳಿಕೆಯನ್ನು ವಿಸ್ತಾರಗೊಳಿಸುತ್ತದೆ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗಲಿದೆ. ಓದುವಿಕೆಯಿಂದ ಅಪಾರ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದಾಗಿದೆ ಎಂದು ಪೆರಡಾಲ ನವಜೀವನ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮಣಿ ಅಭಿಪ್ರಾಯಪಟ್ಟರು.
ಅವರು ಪೆರಡಾಲ ನವಜೀವನ ಪ್ರೌಢಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಬುಧವಾರ ನಡೆದ ವಾಚನ ವಾರಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಕಾರ್ಯದರ್ಶಿ ಲತಾ ಕಾರ್ಯಕ್ರಮಕ್ಕೆ ಶುಭಕೋರಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೂತನ ಕಾರ್ಯದರ್ಶಿ ಸುಮಿತ್ ಎಮ್. ಛಸ್ಮಿತಾ ಚಂದ್ರನ್, ವಿದ್ಯಾ, ಸೋಮನಾಥ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕಿ ಪ್ರಭಾವತಿ ಕೆದಿಲಾಯ ಪುಂಡೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಶಾ ವಂದಿಸಿದರು. ಬಳಿಕ ಕಥಾ ರಚನಾ ಸ್ವರ್ಧೆಯನ್ನು ನಡೆಸಲಾಯಿತು.