ಉಪ್ಪಳ : ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ದೇವಕಾನ ಕೃಷ್ಣ ಭಟ್ ಅವರ ನಿಧನಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸೇವಾಸಂಸ್ಥೆಯ ಉಪ್ಪಳ ಘಟಕ ತೀವ್ರ ಸಂತಾಪ ವ್ಕಕ್ತಪಡಿಸಿದೆ.
ಪಟ್ಲ ಟ್ರಸ್ಟ್‍ನ ಉಪ್ಪಳ ಘಟಕದ ಗೌರವ ಸಲಹೆಗಾರರಾಗಿ ಕಳೆದ ಮೂರುವರ್ಷಗಳಿಂದ ಮಾರ್ಗದರ್ಶಕರಾಗಿದ್ದ ದೇವಕಾನ ಕೃಷ್ಣ ಭಟ್ ಸಂಸ್ಥೆಯ ಎಲ್ಲಾ ಚಟುವಟಿಕೆಗಳಲ್ಲಿ ಮಾರ್ಗದರ್ಶಕರಾಗಿದ್ದರು. ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರೂ, ಅರ್ಥಧಾರಿಗಳೂ ಆಗಿದ್ದ ಶ್ರೀಯುತರು ಕಳೆದ ನಾಲ್ಕು ದಶಕಗಳಿಂದ ಕಾಸರಗೋಡಿನಿಂದ ಉಡುಪಿವರೆಗೆ ವಿವಿಧ ಯಕ್ಷಗಾನ ಕಮ್ಮಟ, ತರಬೇತಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವಿದ್ವಾಂಸರಾಗಿ ತನ್ನ ಅನುಭವ ಧಾರೆ ಎರೆದವರು. ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯ ಸಂಸ್ಥಾಪಕರಾಗಿ ನಾಡಿನುದ್ದಗಲಕ್ಕೂ ಯಕ್ಷಗಾನ ಆಹಾರ್ಯ ಒದಗಿಸಿ ಕಲಾ ಸೇವೆ ಗೈಯುತ್ತಿದ್ದ ಅಜಾತ ಶತ್ರು ದೇವಕಾನ ಕೃಷ್ಣಭಟ್ಟರ ನಿಧನ ಯಕ್ಷಧ್ರುವ ಸಂಸ್ಥೆಗೆ ಮಾತ್ರವಲ್ಲ ಸಮಗ್ರ ತೆಂಕುತಿಟ್ಟು ಯಕ್ಷಗಾನಕ್ಕೆ ಹಾಗೂ ಗಡಿನಾಡ ಯಕ್ಷಗಾನ ಕಲಾರಂಗಕ್ಕೆ ಅತೀ ದೊಡ್ಡ ನಷ್ಟವೇ ಆಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಉಪ್ಪಳ ಘಟಕ ತನ್ನ ಸಂತಾಪ ಸಂದೇಶದಲ್ಲಿ ವ್ಯಕ್ತಪಡಿಸಿದೆ.