ನವದೆಹಲಿ: ಆದ್ಯತೆಯ ವ್ಯಾಪಾರ ಮಾನ್ಯತೆಯನ್ನು ರದ್ದುಗೊಳಿಸಿದ ಅಮೆರಿಕಾದ ನಿರ್ಧಾರದ ಹಿನ್ನೆಲೆಯಲ್ಲಿ ಆ ರಾಷ್ಟ್ರದೊಂದಿಗೆ ಸದೃಢ ಆರ್ಥಿಕ ಒಪ್ಪಂದವಿರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಭಾರತ ಹೇಳಿದೆ.
ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್ ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವುದು ಜೂನ್ 5 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕಾ ಹೇಳಿದೆ.
ಆರ್ಥಿಕ ಒಪ್ಪಂದಗಳಿಗೆ ಸಂಬಂಧಿಸಿದ ಸಂಬಂಧ ಎಂದಿನಂತೆ ಮುಂದುವರೆಯಲಿದೆ. ಸಂದರ್ಭಕ್ಕನುಗುಣವಾಗಿ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕಾದಿಂದ ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದು ನಿರಂತರ ಪ್ರಕ್ರಿಯೆಯ ಒಂದು ಭಾಗವಾಗಿದ್ದು, ಅಮೆರಿಕಾದೊಂದಿಗೆ ಸದೃಢ ಆರ್ಥಿಕ ಒಪ್ಪಂದವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪರಸ್ಪರ ಅನುಕೂಲಕ್ಕೆ ತಕ್ಕಂತೆ ಈ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುಂದಿನ ಪ್ರಗತಿಗಾಗಿ ಎರಡು ರಾಷ್ಟ್ರಗಳು ಜೊತೆಯಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಹೊಂದಿರುವುದಾಗಿ ವಾಣಿಜ್ಯ ಸಚಿವಾಲಯ ಹೇಳಿದೆ.
ಅಮೆರಿಕಾದ ವೈದ್ಯಕೀಯ ಸಾಧನ, ಸಲಕರಣೆಗಳು, ಹೈನುಗಾರಿಕೆಗೆ ಸಂಬಂಧಿಸಿದ ಉತ್ಪನ್ನಗಳಿಗೆ ಭಾರತ ಸೂಕ್ತ ಮಾರುಕಟ್ಟೆಯನ್ನು ಒದಗಿಸುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕಾ ಈ ನಿರ್ಧಾರ ಕೈಗೊಂಡಿದೆ.
ಇದೊಂದು ದುರದೃಷ್ಟಕರವಾಗಿದೆ. ಅಮೆರಿಕಾದಿಂದ ಈ ರೀತಿಯಲ್ಲಿ ನಿರೀಕ್ಷಿಸಿರಲಿಲ್ಲ. ಆದಾಗ್ಯೂ,ಭಾರತದಂತಹ ರಾಷ್ಟ್ರಗಳು, ಇಂತಹ ವಿಚಾರಗಳಲ್ಲಿ ಯಾವಾಗಲೂ ತಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತವೆ ಎಂದು ಹೇಳಿರುವ ವಾಣಿಜ್ಯ ಸಚಿವಾಲಯ, ಉತ್ತಮ ಜೀವನಮಟ್ಟ ನಮ್ಮ ಜನರ ಆಪೇಕ್ಷೆಯಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ರಪ್ತು ಸಂಘಟನೆಗಳ ಒಕ್ಕೂಟ- ಎಫ್ ಐಇ ಒ ಅಧ್ಯಕ್ಷ ಗಣೇಶ ಕುಮಾರ್ ಗುಪ್ತಾ, ಜಿಎಸ್ ಪಿಯಿಂದ ಗಮನಾರ್ಹ ರೀತಿಯಲ್ಲಿ ನಷ್ಟಕ್ಕೊಳಗಾದ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ನೀಡಬೇಕು , ಹಾಗೇ ಮಾಡುವುದರಿಂದ ಮಾರುಕಟ್ಟೆ ನಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.