ಮಂಜೇಶ್ವರ: ಓದಿ ಬೆಳೆಯಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ಓದುವ ಅಭರುಚಿಯನ್ನು ಮೂಡಿಸುವ ಅಭಿಯಾನವನ್ನು ನಡೆಸಿದ ಶಿಕ್ಷಕ ಪಿ. ಎನ್ ಪಣಿಕ್ಕರ್ ರವರ ಸಂಸ್ಮರಣಾ ದಿನವಾದ ಬುಧವಾರದಿಂದ ಒಂದು ವಾರದ ವಾಚನಾ ಸಪ್ತಾಹವನ್ನು ಕೇರಳ ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಸರಕಾರಿ ಪ್ರೌಢಶಾಲೆ ಕುಂಜತ್ತೂರಿನಲ್ಲಿ ವಾಚನಾ ಸಪ್ತಾಹ ಹಾಗೂ ವಿವಿಧ ಕ್ಲಬ್ ಗಳ ಮತ್ತು ಪುಸ್ತಕ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ನಟ, ಜನಪದ ಹಾಡುಗಾರ, ಪ್ರಶಸ್ತಿ ವಿಜೇತ ಕಲಾವಿದ ಸನಲ್ ಪಾಡಿಚಾಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ವೈವಿಧ್ಯಮಯವಾದ ಜನಪದ ಹಾಡುಗಳ ಮೂಲಕ ಉದ್ಘಾಟಿಸಿ ಜನಪದ ಹಾಡುಗಳ ಶ್ರೀಮಂತ ಪರಂಪರೆಯನ್ನು ಅನಾವರಣಗೊಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ್ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಹೈಯರ್ ವಿಭಾಗದ ಸೆಕೆಂಡರಿ ಪ್ರಾಂಶುಪಾಲ ಶಿಶುಪಾಲ, ಶಿಕ್ಷಕ ರವೀಂದ್ರ ರೈ, ಹಿರಿಯ ಶಿಕ್ಷಕಿ ಕನಕಂ ಶುಭಾಶಂಸನೆಗ್ಯೆದರು. ಶಿಕ್ಷಕ ಅಶ್ರಫ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಪ್ರಮೀಳಾ ಕುಮಾರಿ ವಂದಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಹರ್ಷಿತ, ಕುಮಾರಿ ಜಶೀಲ ಕಾರ್ಯಕ್ರಮ ನಿರೂಸಿದರು. ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪ್ರದರ್ಶನ, ನಾಟಕ ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆ, ಓದಿನ ಟಿಪ್ಪಣಿ ಬರೆಯುವ ಸ್ಪರ್ಧೆ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿತ್ತು.