ಪೆರ್ಲ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶಯದಡಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯದ ಜೂನ್ ತಿಂಗಳ ವಲಯ ಸಭೆ ಡಾ.ರವಿಶಂಕರ ಅಡ್ಕಸ್ಥಳ ಅವರ ನಿವಾಸದಲ್ಲಿ ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರಗಿತು.
ಸಭೆಯಲ್ಲಿ ವಿಭಾಗವಾರು ವಿಚಾರ ವಿನಿಮಯದ ಹಾಗು ಜೂ.8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಲಿರುವ ಹಲಸು ಮೇಳದಲ್ಲಿ ಎಣ್ಮಕಜೆ ಹವ್ಯಕ ವಲಯದ ಪಾಲ್ಗೊಳುವಿಕೆ ಹಾಗು ಪೂರ್ಣ ಸಹಕಾರದ ಬಗ್ಗೆ ಚರ್ಚಿಸಲಾಯಿತು.
ಇತ್ತೀಚೆಗೆ ಕರ್ನಾಟಕ ಸರಕಾರದ ಸಂಸ್ಕøತ ವಿಶ್ವವಿದ್ಯಾನಿಲಯ ಬೆಂಗಳೂರಿನಿಂದ `ಉತ್ತಮ ನಂಬಿ ತಿರುಮಲರಾಯ ಪ್ರಣೀತಸ್ಯ ಲಕ್ಷ್ಮೀಕಾವ್ಯಸ್ಯ ಸಟಿಪ್ಪಣಂ ಸಂಪಾದನಮ್' ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದ ಎಣ್ಮಕಜೆ ವಲಯದ ಕಿಳಿಂಗಾರು ಮನೆತನದ ವೈದಿಕ ವೇದ ವಿದ್ವಾಂಸ ಶುಳುವಾಲ ಮೂಲೆ ಕೇಶವ ಕಿರಣ ಬಾಕಿಲಪದವು ಹಾಗು `ವಿದ್ಯಾಮಾಧವ ಪ್ರಣೀತಸ್ಯ ಕಿರಾತಾರ್ಜುನೀಯ ವ್ಯಾಖ್ಯಾನಸ್ಯ ದಶಮಾದಿ ಸಮಾಪ್ತಿ ಪರ್ಯಂತ ಸರ್ಗಾಣಾಂ ಸಟಿಪ್ಪಣಂ ಸಂಪಾದನಮ್' ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದ ಅವರ ಧರ್ಮ ಪತ್ನಿ ಗೌರಿ ಬಾಕಿಲಪದವು ದಂಪತಿಗಳನ್ನು ಎಣ್ಮಕಜೆ ವಲಯದ ಪರವಾಗಿ ಸಮ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.
ಎಣ್ಮಕಜೆ ವಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಿಭಾಗದಲ್ಲಿ 90 ಶೇಕಡಾಕ್ಕಿಂತ ಅಧಿಕ ಅಂಕಗಳಿಸಿದ ವೆಂಕಟೇಶ ಪ್ರಭಾತ ಕಾನ, ನಿತಿನ್ ಯಸ್, ಪಂಚಮಿ ಕುಮಾರಿ ಹಾಗು ಪಿಯುಸಿ ವಿಭಾಗದಲ್ಲಿ ವೈಷ್ಣವಿ ಎಂ, ಇಂದಿರಾ ಶ್ರದ್ಧಾ ಪೆರ್ಲ, ಶ್ರೀವತ್ಸ ಕೆ. ಅವರನ್ನು ಎಣ್ಮಕಜೆ ಹವ್ಯಕ ವಲಯದ ವತಿಯಿಂದ ಸಮ್ಮಾನಿಸಿ ಮುಂದಿನ ವಿಧ್ಯಾಭ್ಯಾಸಕ್ಕೆ ಶುಭಹಾರೈಲಾಯಿತು.
ಇತ್ತೀಚೆಗೆ ಶ್ರೀ ರಾಮಚಂದ್ರಾಪುರ ಮಠದ ವಿಧ್ಯಾರ್ಥಿ ವಾಹಿನಿ ವಿಭಾಗ ಶಿರಸಿಯ ಅಂಬಾಗಿರಿ ಮಠದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಹಾಗು ಬಾನ್ಕುಳಿಯ ಗೋಸ್ವರ್ಗದಲ್ಲಿ ಜರಗಿದ ಮಕ್ಕಳ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡ ವಲಯದ ವಿಧ್ಯಾರ್ಥಿನಿಯರಾದ ಶಮಾ ಕೋಡುಮಾಡು, ಕೀರ್ತನ ಪೆರ್ಲ ಹಾಗು ಸಂಜನ ಪಳನೀರು ಅವರು ಕಾರ್ಯಕ್ರಮದ ಅನುಭವವನ್ನು ಸಭೆಯೊಂದಿಗೆ ಹಂಚಿಕೊಂಡರು.
ಸಭೆಯಲ್ಲಿ ರಾಮಚಂದ್ರಾಪುರ ಮಠದ ಶಾಸನ ತಂತ್ರದ ಸಂಸ್ಥೆಗಳ ಸಹಕಾರ್ಯದರ್ಶಿ ಮತ್ತು ಮುಳ್ಳೇರಿಯಾ ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ ಹಾಗು ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ, ಕಾರ್ಯದರ್ಶಿ ಶಂಕರ ಪ್ರಸಾದ ಕುಂಚಿನಡ್ಕ, ಕೋಶಾಧ್ಯಕ್ಷ ಬಿ.ವಿ.ನಾರಾಯಣ ಭಟ್ಟ ಕುಂಚಿನಡ್ಕ, ವಲಯದ ಗುರಿಕ್ಕಾರರು, ವಲಯ ಪದಾಧಿಕಾರಿಗಳು ಹಾಗು ಶ್ರೀ ಮಠದ ಶಿಷ್ಯರು ಉಪಸ್ಥಿತರಿದ್ದರು.