ಕುಂಬಳೆ: ಕೇರಳಕ್ಕೆ ಮುಂಗಾರು ಮಳೆ ಜೂ.8 ರಂದೇ ಪ್ರವೇಶಿಸಿದ್ದರೂ ಕಾಸರಗೋಡು ಸಹಿತ ಉತ್ತರ ಕೇರಳಕ್ಕೆ ಸೋಮವಾರ ಮುಂಜಾನೆ ಮುಂಗಾರು ಪ್ರವೇಶಿಸಿತು.
ಕಾಸರಗೋಡು ಸಹಿತ ಉತ್ತರ ಕೇರಳದಲ್ಲಿ ಬೆಳಿಗ್ಗೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಾಮಾನ್ಯಕ್ಕಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿತ್ತು. ಗಾಳಿಯಿಂದ ಹಲವೆಡೆ ಮರಗಳು ಮುರಿದು ಬಿದ್ದಿವೆ. ಸೋಮವಾರ ಬೆಳಿಗ್ಗಿನಿಂದಲೇ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ. ಕಳೆದ ವರ್ಷ ರಾಜ್ಯದಲ್ಲಿ ಅತೀ ಕಡಿಮೆ ಮಳೆಯಾದ ಜಿಲ್ಲೆಯಾಗಿತ್ತು ಕಾಸರಗೋಡು. ರಾಜ್ಯದಲ್ಲಿ ಭಾರೀ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದೂ ಈ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಬೇಕೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಹಠಾತ್ ಮಳೆಯ ಆಗಮನದಿಂದ ಜನರು ಸೋಮವಾರ ತಬ್ಬಿಬ್ಬಾದವರಂತೆ ಕಂಡುಬಮದರು. ಬಿರುಬಿಸಿಲಿಗೆ ಬೆಂಡಾಗಿದ್ದರೂ, ಸೋಮಾರ ಹಠಾತ್ ಮಳೆಯಾದುದರಿಂದ ಅನೇಕರು ಕೊಡೆಗಳನ್ನು ತರುವಲ್ಲಿ ಮರೆತಿರುವುದು ಕಂಡುಬಂತು. ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಪ್ರದೇಶದಲ್ಲಿ ಕೊಡೆಯಿಲ್ಲದೆ ಅತ್ತಿತ್ತ ಓಡಾಡುತ್ತಿರುವುದು ಕಂಡುಬಂದಿದೆ.