ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆಯ ವಿರುದ್ದ ಸ್ಪಷ್ಟ ಹಾಗೂ ಗೋಚರಿಸುವಂತಹ ಕ್ರಮ ಕೈಗೊಳ್ಳುವವರೆಗೂ, ಆ ದೇಶ ದೊಂದಿಗೆ ಮಾತುಕತೆ ನಡೆಸಲಾಗದು ಎಂಬ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗುರುವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ವಿಷಯದಲ್ಲಿ ಭಾರತ ತನ್ನ ನಿಲುವನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದೆ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ,
ರಾಜತಾಂತ್ರಿಕ ಸಂಪ್ರದಾಯದಂತೆ ಪಾಕಿಸ್ತಾನದ ಸಹವರ್ತಿಗಳು ಕಳುಹಿಸಿರುವ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅವುಗಳಿಗೆ ಪ್ರತಿಕ್ರಿಯೆಯನ್ನು ಮಾತ್ರ ನೀಡಿದ್ದಾರೆ.
ಪಾಕಿಸ್ತಾನ ಸೇರಿದಂತೆ ಎಲ್ಲ ನೆರೆಹೊರೆಯ ದೇಶಗಳೊಂದಿಗೆ ಭಾರತ ಸಹಜ ಹಾಗೂ ಸಹಕಾರತ್ಮಕ ಸಂಬಂಧ ಬಯಸುತ್ತದೆ ಎಂಬ ಆಂಶವನ್ನು ತಮ್ಮ ಸಂದೇಶಗಳಲ್ಲಿ ಪ್ರಧಾನಿ, ವಿದೇಶಾಂಗ ಸಚಿವರು ಪ್ರಸ್ತಾಪಿಸಿದ್ದಾರೆ. ಉದ್ದೇಶಪೂರ್ಣ ದ್ವಿಪಕ್ಷೀಯ ಸಂಬಂಧ ಹಾಗೂ ಮಾತುಕತೆಗಳನ್ನು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ವಿವರಿಸಿದ್ದು, ಹಿಂಸೆ, ದ್ವೇಷ, ಭಯೋತ್ಪಾದನೆ ಮುಕ್ತ, ನಂಬಿಕೆಯ ಪರಿಸರ ನಿರ್ಮಿಸಲು ಇದು ಅತ್ಯಂತ ಮಹತ್ವದ ಅಂಶ ಎಂದು ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತುಕತೆಯ ವಿಷಯದಲ್ಲಿ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜತಾಂತ್ರಿಕ ಶಿಷ್ಟಚಾರದ ಭಾಗವಾಗಿ ಭಾರತದ ಕಡೆಯಿಂದ ಪತ್ರ ಬರೆಯಲಾಗಿದೆ. ಅಭಿನಂದನಾ ಸಂದೇಶಗಳಿಗೆ ಪ್ರತ್ಯುತ್ತರ ಮಾತ್ರವಾಗಿದೆ. ಈ ರೀತಿಯ ಪ್ರತಿಕ್ರಿಯೆಗಳನ್ನು ಜಗತ್ತಿನ ಹಲವು ದೇಶಗಳ ನಾಯಕರಿಗೆ ಪ್ರಧಾನಿ ಮೋದಿ ಹಾಗೂ ಸಚಿವ ಜೈ ಶಂಕರ್ ರವಾನಿಸಿದ್ದಾರೆ ಇದರಲ್ಲಿ ಅಂತಹ ವಿಶೇಷ ಏನೂ ಇಲ್ಲ ಎಂದು ಸಮರ್ಥಿಸಿಕೊಂಡರು.
ಭಾರತ ರವಾನಿಸಿರುವ ಅಭಿನಂದನಾ ಪ್ರತಿಕ್ರಿಯೆಗಳನ್ನು ಪಾಕಿಸ್ತಾನ ಮಾದ್ಯಮಗಳು ತಿರುಚಿ ಪ್ರಕಟಿಸಿವೆ, ಸರಳ ಹಾಗೂ ನೇರವಾಗಿ ಬರೆದ ಪತ್ರವನ್ನು ಪಾಕಿಸ್ತಾನ ಮಾಧ್ಯಮಗಳು ವಿರೂಪಗೊಳಿಸಿ ಪ್ರಕಟಿಸಿವೆ ಎಂದರು.
ದಕ್ಷಿಣ ಏಷ್ಯಾದ ಎಲ್ಲ ರಾಷ್ಟ್ರಗಳೊಂದಿಗೆ ಸಹಕಾರತ್ಮಕ ಬಾಂಧವ್ಯ ಹೊಂದುವ ಭಾರತದ ನಿಲುವನ್ನು ಪತ್ರದಲ್ಲಿ ಹಂಚಿಕೊಳ್ಳಲಾಗಿದೆ. ಭಯೋತ್ಪಾದನೆ ಮುಕ್ತ ಪರಿಸರ ಸೃಷ್ಟಿಸುವ ಅಗತ್ಯವಿದೆ ಎಂಬುದನ್ನು ಒತ್ತಿಹೇಳಲಾಗಿದೆ ಎಂದರು. ಹಣಕಾಸು ಕ್ರಿಯಾ ಕಾರ್ಯ ಪಡೆ ಸಂಭವನೀಯ ಕ್ರಮಗಳು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆಗಳ ಕುರಿತ ಪ್ರಶ್ನೆಗೆ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಚಿವಾಲಯ ಉತ್ತರಿಸುವುದಿಲ್ಲ. ಎಂದು ರವಿಕುಮಾರ್ ಹೇಳಿದರು.