ಕೊಚ್ಚಿ: ಕೇರಳದಲ್ಲಿ ಮತ್ತೆ ನಿಪಾಹ್ ಮಾಹಾಮಾರಿ ಭಾರಿ ಸದ್ದು ಮಾಡುತ್ತಿದ್ದು, ಕಳೆದ ವಾರ ಶಂಕಿತ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 23 ವರ್ಷದ ವಿದ್ಯಾರ್ಥಿಗೆ ನಿಪಾಹ್ ವೈರಾಣು ಸೊಂಕು ತಗುಲಿರುವುದು ಪತ್ತೆಯಾದ ಬೆನ್ನಲ್ಲೇ ಆತನಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ದಾದಿಯರು ಮತ್ತು ಆತನ ಸ್ನೇಹಿತನಿಗೂ ಸೊಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಪ್ರಸ್ತುತ ಈ ಮೂವರನ್ನೂ ಪ್ರತ್ಯೇಕ ವಿಶೇಷ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಕಳೆದ ವಾರವೇ 23 ವರ್ಷದ ನಿಪಾಹ್ ವೈರಾಣು ಸೊಂಕಿತು ವ್ಯಕ್ತಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ. ತೀವ್ರ ಜ್ವರದಿಂದ ಬಳಲುತ್ತಿದ್ದ ಆತನನ್ನು ಇಲ್ಲಿನ ಇಬ್ಬರು ದಾದಿಯರು ಚಿಕಿತ್ಸೆಗೆ ಒಳಪಡಿಸಿದ್ದರು. ಈ ವೇಳೆ ದಾದಿಯರಿಗೂ ವೈರಾಣು ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಸೊಂಕಿತನ ಸ್ನೇಹಿತನಿಗೂ ವೈರಾಣು ಹರಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಮೂವರನ್ನೂ ಪ್ರತ್ಯೇಕ ವಿಶೇಷ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ರಾಜ್ಯ ಆರೋಗ್ಯ ಸಚಿವರಾದ ಕೆಕೆ ಶೈಲಜಾ ಅವರು, ಶಂಕಿತ ನಿಪಾಹ್ ವೈರಾಣು ಸೋಂಕಿಗೀಡಾಗಿರುವ ವ್ಯಕ್ತಿಗೆ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಂತೆಯೇ ಇತರೆ ರೋಗಿಗಗಳಿಂದ ನಿಪಾಹ್ ವೈರಾಣು ಸೊಂಕಿತ ವ್ಯಕ್ತಿಯನ್ನು ಮತ್ತು ಇಬ್ಬರು ದಾದಿಯರನ್ನು ಬೇರೆ ಕೊಠಡಿಯಲ್ಲಿರಿಸಲಾಗಿದೆ. ಹೀಗಾಗಿ ಆಸ್ಪತ್ರೆಯ ಇತರೆ ರೋಗಿಗಳು ಆತಂಕ ಪಡುವ ಅಗತ್ಯವಿಲ್ಲ. ಅಂತೆಯೇ ಆ ವ್ಯಕ್ತಿಯೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಪರ್ಕ ಸಾಧಿಸಿದ್ದ ವ್ಯಕ್ತಿಗಳನ್ನೂ ಕೂಡ ಮುಂಜಾಗ್ರತಾ ಕ್ರಮವಾಗಿ ಇತರೆ ಕೊಠಡಿಯಲ್ಲಿರಿಸಿ ವೀಕ್ಷಣೆ ಮಾಡಲಾಗುತ್ತಿದೆ. ಹೀಗಾಗಿ ಇತರೆ ರೋಗಿಗಳು ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನಿಪಾಹ್ ಎದುರಿಸಲು ಕೇರಳ ಸರ್ವಸನ್ನದ್ಧ:
ಇದೇ ವೇಳೆ ಮಾರಣಾಂತಿಕ ನಿಪಾಹ್ ವೈರಾಣು ಸೋಂಕು ಎದುರಿಸಲು ಕೇರಳ ಸರ್ಕಾರ ಸರ್ವ ಸನ್ನದ್ದ ರೀತಿಯಲ್ಲಿ ಸಿದ್ಧವಾಗಿದ್ದು, ಅಗತ್ಯ ಔಷಧೀಯ ಪರಿಕರಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶಶಿಕಲಾ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೇರಳ ಕರಾವಳಿ ತೀರಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಲಿದ್ದು, ಕೇರಳದಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗುತ್ತಿದೆ. ಇದರ ನಡುವೆ ನಿಪಾಹ್ ವೈರಾಣು ಸೋಂಕು ಕೇರಳದಲ್ಲಿ ವ್ಯಾಪಕ ಆತಂಕ ಸೃಷ್ಟಿ ಮಾಡಿದೆ.