ಮಂಜೇಶ್ವರ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಪ್ಠಾನ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಸಾಮಾಜಿಕ ಮುಂದಾಳು ಗೊಪಾಲ ಶೆಟ್ಟಿ ಅರಿಬೈಲು ಅವರು ದೀಪ ಬೆಳಗಿಸಿ ನೆರವೇರಿಸಿದರು. ರಕ್ತದಾನ ಬಹಳ ಪವಿತ್ರವಾದ ದಾನವಾಗಿದ್ದು, ರಕ್ತದಾನದಿಂದ ಮಾತ್ರ ಹೃದಯಗಳನ್ನು ಬೆಸೆಯಲು ಸಾಧ್ಯ ಎಂದು ಅವರು ಈ ಸಂದರ್ಭ ತಿಳಿಸಿದರು. ಡಾ.ಮುರಲೀ ಮೋಹನ್ ಚೂಂತಾರು ಮತ್ತು ಡಾ.ರಾಜಶ್ರೀ ಮೋಹನ್ ಇವರು ಬಿಡುವಿಲ್ಲದ ವೃತ್ತಿಯ ನಡುವೆಯೂ ಸಾಮಾಜಿಕ ಕಳಕಳಿಯಿಂದ ರಕ್ತದಾನ ಶಿಬಿರವನ್ನು ದಂತ ಚಿಕಿತ್ಸಾಲಯದಲ್ಲಿ ಆಯೋಜಿಸಿರುವುದು ಈ ದಂಪತಿಗಳ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಬ್ರಾಹ್ಮರಿ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಸುಖೇಶ್ ಬೆಜ್ಜ, ಕಲ್ಲೂರು ಎಜುಕೇಶನ್ ಟ್ರಸ್ಟ್‍ನ ಅಬ್ದುಲ್, ಮಂಜೇಶ್ವರ ಯೂತ್ ಮುಸ್ಲಿಂ ಲೀಗ್ ಉಪಾಧ್ಯಕ್ಷ ರಫೀಕ್ ಯು.ಎಂ, ವೆನ್‍ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಶರತ್ ರಾವ್, ಹಿರಿಯ ತಾಂತ್ರಿಕ ತಜ್ಞರಾದ ಆಂಟೋನಿ, ಅಶೋಕ್, ಶ್ರೀಲತಾ ಮುಂತಾದವರು ಉಪಸ್ಥಿತರಿದ್ದರು.
ಚೂಂತಾರು ಸರೋಜಿನಿ ಪ್ರತಿಷ್ಠಾನ ಕಾರ್ಯದರ್ಶಿ ಡಾ.ಮುರಲೀ ಮೋಹನ್ ಚೂಂತಾರು ಪ್ರಾಸ್ತವಿಕವಾಗಿ ಮಾತಾನಾಡಿದರು. ವೆನ್‍ಲಾಕ್ ಆಸ್ಪತ್ರೆಯ ವೈದ್ಯರು ಮತ್ತು ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆದ ಶಿಬಿರದಲ್ಲಿ ಸುಮಾರು 22 ಮಂದಿ ರಕ್ತದಾನ ಮಾಡಿದರು. ಸುರಕ್ಷಾ ದಂತ ಚಿಕಿತ್ಸಾಲಯದ ರಮ್ಯ, ರಶ್ಮಿ, ರೋಹಿಣಿ, ಯಶಸ್ವಿನಿ ಮತ್ತು ವಾಣಿ ಉಪಸ್ಥಿತರಿದ್ದರು. ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ `ರಕ್ತದಾನ ಜೀವದಾನ' ಎಂಬ ಪುಸ್ತಕವನ್ನು ಉಚಿತವಾಗಿ ಹಂಚಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.